ಗ್ರಾಮಸ್ಥರಿಂದಲೇ ಕೆರೆ ಪುನಶ್ಚೇತನ

kere story
ಸಾಗರ ತಾಲೂಕಿನ ಎಂ.ಎಲ್.ಹಳ್ಳಿಯಲ್ಲಿ ಗ್ರಾಮಸ್ಥರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಕೆರೆಯಲ್ಲಿ ಹೂಳು ತೆಗೆಸುತ್ತಿರುವುದು.
Published on

ತ್ಯಾಗರ್ತಿ: ಮಲೆನಾಡಿನ ಕೃಷಿಕರಿಗೆ ಕೆರೆ ಕಟ್ಟೆಗಳೇ ಜೀವಾಳ. ಹಿರಿಯರು ನೂರಾರು ವರ್ಷಗಳ ಹಿಂದೆ ಪ್ರತಿ ಊರಿನಲ್ಲೂ ಕೆರೆ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಹಲವು ಅನಾವೃಷ್ಟಿ, ಬರಗಾಲದಿಂದ ಹೂಳು ತುಂಬಿಕೊಂಡು ಕೆರೆ ಒತ್ತುವರಿ ಸೇರಿ ವಿವಿಧ ಕಾರಣಕ್ಕೆ ಇತ್ತೀಚೆಗೆ ಅನೇಕ ಕೆರೆಗಳು ಜೀವ ಕಳೆದುಕೊಂಡಿವೆ. ಸಾಗರ ತಾಲೂಕಿನ ಪಡವಗೋಡು ಗ್ರಾಪಂನ ಎಂ.ಎಲ್.ಹಳ್ಳಿ ಗ್ರಾಮದ ಲಿಂಗದಹಳ್ಳಿ ಕೆರೆ ಇಂಥದ್ದೇ ಸ್ಥಿತಿಯಲ್ಲಿತ್ತು.

ಕೆರೆ ನಾಮಾವಶೇಷವಾದರೆ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗಲಿದೆ ಎಂಬುದನ್ನು ಅರಿತ ಗ್ರಾಮಸ್ಥರು ಕೆರೆ ಪುನಶ್ಚೇತನಕ್ಕೆ ಮುಂದಾಗಿದ್ದಾರೆ. ಹೂಳು ತೆಗೆಯುವ ಕಾರ್ಯ ಭರದಿಂದ ಸಾಗಿದೆ. ಲಿಂಗದಹಳ್ಳಿ ಕೆರೆ 6.17 ಎಕರೆ ವಿಸ್ತೀರ್ಣ ಹೊಂದಿದ್ದು, ಮೂರು ಸಾವಿರ ಕುಟುಂಬಗಳ ಸಾವಿರಾರು ಎಕರೆ ಭತ್ತ, ಅಡಕೆ, ಕಬ್ಬು, ಶುಂಠಿ ಕೃಷಿ ಚಟುವಟಿಕೆಗೆ ಮತ್ತು ಜೀವನ ನಿರ್ವಹಣೆಗೆ ಆಧಾರವಾಗಿದೆ.

ಕೆರೆ ಪುನಶ್ಚೇತನಕ್ಕೆ ಲಿಂಗದಹಳ್ಳಿ ಗ್ರಾಮಸ್ಥರು ವಿವಿಧ ದಾನಿಗಳು, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಒಂದು ಸಮಿತಿ ಮಾಡಿಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯ ಪಡೆದು ಕಾಮಗಾರಿ ಆರಂಭಿಸಿದ್ದಾರೆ. ಲಿಂಗದಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 15 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ.

85 ಲಕ್ಷ ರೂ. ವೆಚ್ಚದಲ್ಲಿ ಕೆಲಸ: ಲಿಂಗದಹಳ್ಳಿ ಕೆರೆಯಲ್ಲಿ ಒಂದು ವಾರದಿಂದ ಎರಡು ಹಿಟಾಚಿ ಯಂತ್ರ, ಒಂದು ಜೆಸಿಬಿ ಮತ್ತು ಹದಿನೈದು ಟ್ರಾೃಕ್ಟರ್ ಬಳಸಿ ಕಾಮಗಾರಿ ನಡೆಸಲಾಗುತ್ತಿದೆ. ಕೆರೆ ಅಭಿವೃದ್ಧಿಯಾದರೆ ನೂರಾರು ರೈತರಿಗೆ, ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ನೆರವಾಗಲಿದೆ. 85 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು, ಆರ್ಥಿಕ ಸಂಪನ್ಮೂಲ ಸಂಗ್ರಹಣೆಗೆ ಗ್ರಾಮದ ಶ್ರೀ ರಾಮ ಚಾರಿಟಬಲ್ ಟ್ರಸ್ಟ್ ಮೂಲಕ ದಾನಿಗಳನ್ನು ಸಂಪರ್ಕಿಸಲಾಗಿದೆ. ಗ್ರಾಮದ ಕೃಷಿಕರು, ಯುವಜನರು ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ. ಕೆರೆ ಅಭಿವೃದ್ಧಿ ಜತೆಗೆ ಸುತ್ತ ವಾಕಿಂಗ್ ಪಾಥ್ ನಿರ್ಮಾಣ, ಹಸಿರೀಕರಣ ಸೇರಿ ಸುತ್ತಲಿನ ಪರಿಸರ ಗಿಡ ನೆಡುವ ಯೋಜನೆ ರೂಪಿಸಲಾಗಿದೆ.

ಧರ್ಮಸ್ಥಳ ಯೋಜನೆ ಮೇಲ್ವಿಚಾರಣೆ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿವೃತ್ತ ಸಿವಿಲ್ ಇಂಜಿನಿಯರ್ ಗಣಪತಿ ಅವರನ್ನು ಕಾಮಗಾರಿ ಮೇಲ್ವಿಚಾರಣೆಗೆ ನೇಮಿಸಲಾಗಿದೆ. ಗಣಪತಿ ಅವರು ಅಗತ್ಯ ತಾಂತ್ರಿಕ ಸಹಕಾರ ನೀಡುತ್ತಿದ್ದಾರೆ. ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪಡವಗೋಡು ಗ್ರಾಪಂ ಅಧ್ಯಕ್ಷ ನಾಗರಾಜ ಹಿರಳೆ, ಪಿಡಿಒ ಉಲ್ಲಾಸ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪ್ರತಿದಿನ ಮೇಲ್ವಿಚಾರಣೆ ಮಾಡುವುದು ಸೇರಿ ಗ್ರಾಮಸ್ಥರಿಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ. ಕೆರೆ ಸಮಿತಿ ಪ್ರಮುಖರಾದ ಎಲ್.ಸುಬ್ಬರಾವ್, ಎಲ್.ಆರ್.ದತ್ತಾತ್ರೇಯ, ಎಲ್.ಎಂ.ಲಕ್ಷ್ಮೀನಾರಾಯಣ, ಬಾಲಚಂದ್ರ ಮತ್ತಿತರರು ಕೆರೆ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮ ಕೆರೆ ಅಭಿವೃದ್ಧಿಗೆ ಆರ್ಥಿಕವಾಗಿ ದೊಡ್ಡ ಮಟ್ಟದಲ್ಲಿ ಸಹಕಾರ ನೀಡುತ್ತಿದ್ದಾರೆ. ಅವರ ಸಾಮಾಜಿಕ ಕಳಕಳಿಯಿಂದ ಗ್ರಾಮೀಣ ಭಾಗದಲ್ಲಿ ಇಂದು ಅನೇಕ ಬದಲಾವಣೆಗಳನ್ನು ಕಾಣುವಂತಾಗಿದೆ ಎನ್ನುತ್ತಾರೆ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಲ್.ಎಂ.ಬಾಲಚಂದ್ರ.

ನಮ್ಮ ಊರು ನಮ್ಮ ಕೆರೆ ಎಂಬ ಭಾವನೆ ಎಲ್ಲರಿಗೂ ಇರಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಗರ ತಾಲೂಕಿನಲ್ಲಿ ಐದಾರು ವರ್ಷಗಳಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ 56.5 ಲಕ್ಷ ರೂ. ವೆಚ್ಚದಲ್ಲಿ ಏಳು ಗ್ರಾಮದ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದೀಗ ಲಿಂಗದಹಳ್ಳಿ ಕೆರೆ ಅಭಿವೃದ್ಧಿಗೆ 12 ಲಕ್ಷ ರೂ. ಅನುದಾನ ಬಂದಿದೆ. ಕೆರೆ ಹೂಳೆತ್ತಲು ಆರುನೂರು ಗಂಟೆ ಹಿಟಾಚಿ ಕೆಲಸ ಆಗಬಹುದು ಎಂದು ಅಂದಾಜಿಸಲಾಗಿದೆ. ಅಗತ್ಯಬಿದ್ದರೆ ಇನ್ನು ಹೆಚ್ಚಿನ ಸಹಾಯ ನೀಡಲಾಗುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಾಂತಾ ನಾಯ್ಕ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net