ಗ್ರಾಮಸಭೆ ಇಲ್ಲದೆ ಕುಂಠಿತ: ಸರ್ಕಾರದ ಹೊಸ ಯೋಜನೆಗಳ ಮಾಹಿತಿ ಇಲ್ಲ ಕರೊನಾ ಸೋಂಕು ಕಾರಣ

Kailancha-Ph-01-Gramsabe Story-Photo-Hulikere-Gunnur Gram Panchyth Photo-24-6-2021
Published on

ಕೈಲಾಂಚ : ಕರೊನಾ ಸಾಂಕ್ರಾಮಿಕ ರೋಗದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಗ್ರಾಮಸಭೆಗಳು ನಡೆಯದ ಕಾರಣ ಗ್ರಾಮೀಣ ಪ್ರದೇಶದ ಸಾರ್ವಜನಿಕ ಕೆಲಸ ಕಾರ್ಯಗಳು ಕುಂಠಿತಗೊಳ್ಳುತ್ತಿವೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಕೈಲಾಂಚ ಹೋಬಳಿಯಲ್ಲಿ ವಿಭೂತಿಕೆರೆ, ಬನ್ನಿಕುಪ್ಪೆ, ಕೈಲಾಂಚ, ಹುಲಿಕೆರೆ-ಗುನ್ನೂರು, ಹುಣಸನಹಳ್ಳಿ ಗ್ರಾಮ ಪಂಚಾಯಿತಿಗಳಿವೆ. ಸಾರ್ವಜನಿಕ ಕೊಂಡಿಯಾಗಿ ಗ್ರಾಪಂಗಳು ಕಾರ್ಯೋನ್ಮುಖವಾಗಿವೆ. ರೈತರಿಗೆ, ಮಹಿಳೆಯರಿಗೆ, ಬಹಳಷ್ಟು ಉಪಯುಕ್ತ ಯೋಜನೆಗಳು ಗ್ರಾಪಂನಲ್ಲಿವೆ. ಆದರೆ, ಕರೋನಾ ಎರಡನೇ ಅಲೆಯಿಂದ ಗ್ರಾಪಂಗಳಲ್ಲಿ ಆಗಿಂದಾಗ್ಗೆ ನಡೆಯಬೇಕಿದ್ದ ಗ್ರಾಮಸಭೆ, ವಿಶೇಷ ಗ್ರಾಮಸಭೆಗಳಿಗೆ ಕೊಕ್ ಬಿದ್ದಿದೆ. ಇದರಿಂದ ಸರ್ಕಾರದ ಯೋಜನೆ ಪಡೆಯಬೇಕಾದ ರೈತಾಪಿ ವರ್ಗ ಮಾಹಿತಿ ಕೊರತೆಯಿಂದಾಗಿ ಯೋಜನೆಯಿಂದ ದೂರ ಉಳಿಯುವಂತಾಗಿದೆ.

ಸರ್ಕಾರ ಪ್ರತಿವರ್ಷ ರೈತರಿಗೆ, ಗ್ರಾಮೀಣ ಮಹಿಳೆಯರಿಗೆ ಹಲವಾರು ಹೊಸ ಯೋಜನೆಗಳನ್ನು ಪರಿಚಯಿಸುತ್ತದೆ. ಗ್ರಾಮಸಭೆಗಳಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಸಾಮಾಜಿಕ ಅರಣ್ಯ, ಪಶುಪಾಲನೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ರೈತರು ಕೂಡ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆಗಳೆಡೆಗೆ ಗಮನ ಸೆಳೆಯುತ್ತಿದ್ದರು. ಅಲ್ಲದೆ ಯೋಜನೆಗಳ ಲಾಭ ಪಡೆಯುತ್ತಿದ್ದರು. ಅಲ್ಲದೇ ಗ್ರಾಮಸಭೆಗಳಲ್ಲೇ ಅಧಿಕಾರಿಗಳು ಯೋಜನೆಗಳ ಮಾಹಿತಿ ನೀಡಿ ರೈತರಿಂದ ಕಡತ ಪಡೆದು ಗ್ರಾಪಂಗಳಿಂದ ಯೋಜನೆ ಅನುಷ್ಠಾನಕ್ಕೆ ಸೂಚಿಸಿ ಹೋಗುತ್ತಿದ್ದುದರಿಂದ ರೈತರಿಗೆ ತಾಲೂಕು, ಜಿಲ್ಲಾ ಮಟ್ಟದ ಕಚೇರಿಗಳಿಗೆ ಅಲೆಯುವುದು ತಪ್ಪುತ್ತಿತ್ತು. ಅಲ್ಲದೇ ಗ್ರಾಮಸಭೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಬೀದಿ ದೀಪ, ನೈರ್ಮಲ್ಯ, ಆರೋಗ್ಯ, ಪರಿಸರ ಶೌಚಗೃಹ, ಪಿಂಚಣಿ, ಆಶ್ರಯ ವಸತಿ ಮನೆ ಸಮಸ್ಯೆಗಳು ಕೇಳಿ ಬರುತ್ತಿದ್ದವು. ವಾರ್ಡ್ ಸಭೆಗಳಲ್ಲಿ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿತವಾಗಿ ಕ್ರಿಯಾಯೋಜನೆಗಳೂ ಸಿದ್ಧಗೊಳ್ಳುತ್ತಿದ್ದವು. ಆದರೆ ಗ್ರಾಮಸಭೆ, ವಾರ್ಡ್‌ಸಭೆಗಳು ರದ್ದಾಗಿರುವುದು ಜನರಿಗೆ ಸಂಕಷ್ಟದ ಜತೆಗೆ ಸರ್ಕಾರದ ವಿವಿಧ ಇಲಾಖೆಗಳ ಹೊಸ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದಂತಾಗಿದೆ.

ಸರ್ಕಾರ ಕೋವಿಡ್ ನಿಯಮಾವಳಿ ಪ್ರಕಾರ ಯಾವುದೇ ಸಭೆ, ಸಮಾರಂಭ ನಡೆಸುವಂತಿಲ್ಲ. ಆದರೆ, ಗ್ರಾಪಂಗಳಲ್ಲಿನ ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಪ್ರತಿ ಮನೆಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳು, ಗ್ರಾಪಂನಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ ಹಾಗೂ ಜನರಿಗೆ ಸರ್ಕಾರದ ಯೋಜನೆ ಲಾಭ ತಲುಪಿಸಲು ಮುಂದಾಗಿದ್ದಾರೆ.

ಶಿವಕುಮಾರ್ ಇಒ, ತಾಪಂ, ರಾಮನಗರ

ಗ್ರಾಮಸಭೆಗಳು ನಡೆಯದ ಇಂತಹ ಸಮಯದಲ್ಲಿ ಗ್ರಾಪಂ ಅಧಿಕಾರಿಗಳು ವಿವಿಧ ಇಲಾಖೆಗಳಲ್ಲಿ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯುಳ್ಳ ಕರಪತ್ರ ಹಂಚಿ, ಇಲ್ಲವೇ ಪ್ರತೀ ಗ್ರಾಮದ ಮನೆಗಳಿಗೆ ಭೇಟಿ ಮಾಡಿ ಯೋಜನೆಗಳು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು.

ಲಿಂಗೇಗೌಡ ನಾಗೋಹಳ್ಳಿ

ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮತ್ತು ಜನರ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಹಲವು ಹೊಸ ಹೊಸ ಯೋಜನೆಗಳನ್ನು ಆಗಿಂದಾಗ್ಗೆ ತರುತ್ತಿರುತ್ತದೆ. ಅವುಗಳ ಅನುಷ್ಟಾನ ಗ್ರಾಮಸಭೆಗಳಲ್ಲಿ ಆಗಬೇಕಾಗಿರುತ್ತದೆ. ಗ್ರಾಮಸಭೆಗಳು ನಡೆಯದ ಕಾರಣ ಯೋಜನೆ ಕುಂಠಿತಗೊಳ್ಳುವ ಆತಂಕ ಎದುರಾಗಿದೆ. ಆಯಾ ಗ್ರಾಮಗಳಲ್ಲೇ ವಾರ್ಡ್ ಸಭೆ ಮೂಲಕ ಜನರಿಗೆ ಯೋಜನೆ ಲಾಭಗಳನ್ನು ತಿಳಿಸುವ ಕೆಲಸವನ್ನು ಗ್ರಾಪಂಗಳು ಮಾಡಿದರೆ ಜನರಿಗೆ ಉಪಯೋಗವಾಗುತ್ತದೆ.

ರಾಘವೇಂದ್ರ ಕಾಡನಕುಪ್ಪೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net