ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಿ

07 KRN-2
ಕೆ.ಆರ್.ನಗರದ ತಾಪಂ ಆವರಣದಲ್ಲಿ ಆಯೋಜಿಸಿದ್ದ ಪಿಡಿಒಗಳ ಸಭೆಯಲ್ಲಿ ಡಿ.ರವಿಶಂಕರ್ ಮಾತನಾಡಿದರು. ಎಂ.ಜಿ.ಸಂತೋಷ್ ಕುಮಾರ್, ಮನು ಹಾಜರಿದ್ದರು.
Published on

ಕೆ.ಆರ್.ನಗರ: ದೇಶ ಅಭಿವೃದ್ಧಿ ಹೊಂದಬೇಕಾದರೆ ಮೊದಲು ಗ್ರಾಮ ಪಂಚಾಯಿತಿಗಳು ಅಭಿವೃದ್ಧಿಯಾಗಬೇಕು. ಹಾಗಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಾವು ಜನಸಾಮಾನ್ಯರಿಗೆ ಕನಿಷ್ಠ ಮೂಲಸೌಲಭ್ಯ ನೀಡದಿದ್ದಲ್ಲಿ ಅಭಿವೃದ್ಧಿ ಹೇಗೆ ಸಾಧ್ಯವಾಗಲಿದೆ? ಪಂಚಾಯಿತಿಗಳಲ್ಲಿ ನರೇಗಾ ಕಾರ್ಯಕ್ರಮದಡಿ ಅನುದಾನ ಬಳಸಿಕೊಳ್ಳುವ ಎಲ್ಲ ಕೆಲಸಗಳನ್ನು ಮಾಡಿ ಪ್ರಗತಿ ತೋರಿಸಬೇಕು ಎಂದು ಎಚ್ಚರಿಕೆ ನೀಡಿದರು.

ನಿವೇಶನಗಳ ಬೇಡಿಕೆಗೆ ಅನುಗುಣವಾಗಿ ಜಾಗ ಗುರುತಿಸುವ ಜತೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ರಾಜೀವ್‌ಗಾಂಧಿ ವಸತಿ ನಿಗಮದಿಂದ ಈ ಸಾಲಿನಲ್ಲಿ ತಾಲೂಕಿಗೆ 1400ಕ್ಕೂ ಅಧಿಕ ವಸತಿ ಮಂಜೂರಾಗಿದ್ದು, ಆರು ತಿಂಗಳು ಕಳೆದರೂ ಗ್ರಾಮ ಸಭೆ ಮಾಡಿ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ. ಹಾಗಾಗಿ ಎಲ್ಲ ಪಿಡಿಒಗಳಿಗೆ ನೋಟಿಸ್ ನೀಡುವಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು.

ಜೂ.20 ರೊಳಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ತಾಲೂಕು ಪಂಚಾಯಿತಿ ಮತ್ತು ನನಗೆ ವರದಿ ಸಲ್ಲಿಸಬೇಕು. ಬೇಜವಾಬ್ದಾರಿತನ ತೋರಿದರೆ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.

ಕೆಲವು ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ಪರದಾಡುವಂತಾಗಿದೆ. ಆದ್ದರಿಂದ ಪ್ರತಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಬೇಕು. ಇದಕ್ಕೆ ಪಿಡಿಒಗಳು, ಕಂದಾಯ ಅಧಿಕಾರಿಗಳು ನೆರವು ಪಡೆಯಬಹುದು. ಕೆರೆಗಳ ಹೂಳೆತ್ತಲು ಜೆಸಿಬಿಗಳನ್ನು ಬಳಕೆ ಮಾಡುತ್ತಿದ್ದು, ಅಂತಹದ್ದನ್ನು ಪತ್ತೆ ಹಚ್ಚುವ ಕೆಲಸವಗಬೇಕು ಎಂದು ಹೇಳಿದರು.

ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಇಒ ಮನು, ತಾಪಂ ವ್ಯವಸ್ಥಾಪಕಿ ಅನಿತಾ, ಸಿಬ್ಬಂದಿ ಕರಿಗೌಡ, ವಸತಿ ಯೋಜನೆ ನೋಡಲ್ ಅಧಿಕಾರಿ ಕುಮಾರನಾಯಕ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net