

ಕಡೂರು: ತಾಲೂಕಿನ ಜೋಡಿಹೋಚಿಹಳ್ಳಿ ಗ್ರಾಪಂ ಅಧ್ಯಕ್ಷನ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಅಗತ್ಯ ಓರ್ವ ಸದಸ್ಯನ ಬೆಂಬಲ ದೊರೆಯದೆ ಅವಿಶ್ವಾಸ ವಿಲವಾಯಿತು.
ಗ್ರಾಪಂನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಆರೋಪಿಸಿ ಅಧ್ಯಕ್ಷ ಬಿ.ಟಿ.ತ್ರಿಮೂರ್ತಿ ವಿರುದ್ಧವೇ ಗ್ರಾಪಂನ ಕೆಲ ಸದಸ್ಯರು ತರೀಕೆರೆ ಉಪವಿಭಾಗಾಧಿಕಾರಿ ಡಾ. ಕಾಂತರಾಜು ಅವರಿಗೆ ಅವಿಶ್ವಾಸ ನಿರ್ಣಯ ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಮಂಗಳವಾರ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಅವಿಶ್ವಾಸ ನಿರ್ಣಯ ಸಭೆ ನಿಗದಿಯಾಗಿತ್ತು.
ಒಟ್ಟು 10 ಸದಸ್ಯಬಲ ಹೊಂದಿರುವ ಗ್ರಾಪಂನಲ್ಲಿ ಅವಿಶ್ವಾಸ ನಿರ್ಣಯ ಅಂಗೀಕಾರವಾಗಲು 7 ಸದಸ್ಯರ ಬೆಂಬಲ ಅಗತ್ಯವಾಗಿತ್ತು. ಆದರೆ ಅವಿಶ್ವಾಸ ನಿರ್ಣಯದ ಸಭೆಗೆ ಕೇವಲ 6 ಸದಸ್ಯರು ಹಾಜರಾಗಿದ್ದರಿಂದ ಸಭೆಗೆ ಬಹುಮತವಿಲ್ಲದ ಪರಿಣಾಮ ಅವಿಶ್ವಾಸ ನಿರ್ಣಯ ವಿಲವಾಯಿತು. ಅಧ್ಯಕ್ಷ ತ್ರಿಮೂರ್ತಿ ಸೇರಿದಂತೆ ಸದಸ್ಯರಾದ ಯಶೋದಾ, ಸಣ್ಣಪ್ಪ, ಕುಮಾರಪ್ಪ ಗೈರಾಗಿದ್ದರು. ಇನ್ನು ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾಬಾಯಿ, ಸದಸ್ಯರಾದ ನಾಗೇಶ, ರೇಖಾ, ಪ್ರೇಮಾ, ವಿದ್ಯಾ ಸರಸ್ವತಿ, ಸಂತೋಷ್ ಹಾಜರಾಗಿದ್ದರು.
ಪ್ರಸ್ತುತ ಅವಿಶ್ವಾಸ ನಿರ್ಣಯ ಸಭೆ ಕೋರಂ ಇಲ್ಲದ್ದರಿಂದ ಬಹುಮತದ ಕೋರಂ ಪ್ರಕ್ರಿಯೆ ನಡೆಯಲಿಲ್ಲ. ಅವಿಶ್ವಾಸ ಮಂಡನೆ ಸಭೆಯನ್ನು ಮುಂದೂಡಲು ಸಾಧ್ಯವಿಲ್ಲದ್ದರಿಂದ ಮುಂದಿನ ಆರು ತಿಂಗಳು ಅವಿಶ್ವಾಸ ಮಂಡನೆ ಮಾಡಲು ಅವಕಾಶವಿಲ್ಲ ಎಂದು ಉಪವಿಭಾಗಾಧಿಕಾರಿ ಡಾ. ಕಾಂತರಾಜು ಸ್ಪಷ್ಟಪಡಿಸಿದರು.