

ಸರಗೂರು: ಪುಸ್ತಕಗಳನ್ನು ಹೆಚ್ಚು ಓದುವುದರಿಂದ ಜ್ಞಾನ ವೃದ್ಧಿಯಾಗಲಿದೆ ಎಂದು ಗ್ರಂಥಪಾಲಕ ಬಿಡುಗಲು ಶಿವಣ್ಣ ತಿಳಿಸಿದರು.
ತಾಲೂಕಿನ ಶಾಖಾ ಗ್ರಂಥಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯ ಮತ್ತು ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳುತ್ತಿದ್ದೇವೆ ಎಂದರೆ ಅದು ಗ್ರಂಥಾಲಯದ ಸೇವೆಯಿಂದ. ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಹೆಚ್ಚಾಗಿ ಭೇಟಿ ನೀಡುವ ಮೂಲಕ ಪುಸ್ತಕಗಳನ್ನು ಓದಿ ಸಮಗ್ರವಾಗಿ ವಿಚಾರ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಜೇತರಿಗೆ ಬಹುಮಾನ: ಗ್ರಂಥಪಾಲಕರ ದಿನಾಚರಣೆಯ ಪ್ರಯುಕ್ತ ಶಾಲಾ-ಕಾಲೇಜು ಮಕ್ಕಳಿಗೆ ಚಿತ್ರಕಲೆ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಚಿತ್ರಕಲಾ ಸ್ಪರ್ಧೆ-ಯೋಜಿತ್ ಅರಸ್ (ಪ್ರಥಮ), ರಂಜಿತಾ (ದ್ವೀತಿಯ), ಅಪೂರ್ವ ಮತ್ತು ಆದ್ಯ (ತೃತೀಯ). ರಸಪ್ರಶ್ನೆ- ಪ್ರಕಾಶ್ (ಪ್ರ), ಸೋಮೇಶ್ (ದ್ವಿ), ಪ್ರವೀಣ್ ಮತ್ತು ರಂಗನಾಥ್ ತೃತೀಯ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಧುಕುಮಾರ್, ಸಂಪತ್‌ಕುಮಾರ್, ಚಿನ್ಮಯ, ಹೇಮಾ, ವರ್ಷ, ಮಂಜುನಾಥ್, ಪ್ರವೀಣ್, ಗಿರೀಶ್, ಪ್ರಕಾಶ್, ಹರ್ಷ, ಪವನ್, ಮಹೇಶ್, ರಂಗನಾಥ್, ಸೋಮೇಶ್, ವಿವೇಕ್, ಶಶಾಂಕ್, ಉಲ್ಲಾಸ್ ಮತ್ತು ಶಾಲಾ ಮಕ್ಕಳು ಹಾಜರಿದ್ದರು.