ಗ್ಯಾರಂಟಿ ಯೋಜನೆ ಬಡವರ ಬದುಕಿಗೆ ಸಹಕಾರಿ

27 kdr 3 gurarntee
ಕಡೂರು ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕೈಪಿಡಿಯನ್ನು ಶಿವಾನಂದಸ್ವಾಮಿ ಬಿಡುಗಡೆಗೊಳಿಸಿದರು. ಕೆ.ಎಸ್.ಆನಂದ್, ಅಂಶುಮಂತ್, ಭಂಡಾರಿ ಶ್ರೀನಿವಾಸ್, ಚಂದ್ರಪ್ಪ, ಅಶೋಕ್ ಮತ್ತಿತರರಿದ್ದರು.
Published on

ಕಡೂರು: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಸಹಕಾರಿ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಸದೃಢರಾಗಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಯೋಜನೆಗಳ ಜತೆ ಅನುದಾನ ಒದಗಿಸುವ ಮೂಲಕ ಪ್ರಗತಿಗೆ ಒತ್ತು ನೀಡುತ್ತಿದೆ ಎಂದರು.

ಈಗಾಗಲೇ ಬಸ್ ನಿಲ್ದಾಣಗಳ ಅಭಿವೃದ್ಧಿಗೆ 12 ಕೋಟಿ ರೂ. ಅನುದಾನ ಮಂಜೂರಾಗಿದೆ. ಕೂಡಲೇ ಸಾರಿಗೆ ಸಚಿವರೊಂದಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಗ್ರಾಮಾಂತರ ಭಾಗದಲ್ಲಿ ಸಾರಿಗೆ ನಿಗಮದ ಬಸ್ ಸಂಪರ್ಕ ಕಾಣದ ಹಿರೇನಲ್ಲೂರು ಹೋಬಳಿ ಸೇರಿದಂತೆ ಎಮ್ಮೆದೊಡ್ಡಿ ಭಾಗದ ಹಲವು ಗ್ರಾಮಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಿಕೊಡಲಾಗಿದೆ. 19 ಹೊಸ ಸಾರಿಗೆ ಬಸ್‌ಗಳನ್ನು ಕಡೂರು ಘಟಕಕ್ಕೆ ಮಂಜೂರು ಮಾಡಿಸಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಐದು ಯೋಜನೆಗಳು ಸಂಪೂರ್ಣ ಫಲಪ್ರದವಾಗಿವೆ ಎಂದು ಹೇಳಿದರು.

ಭದ್ರಾಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಬಡಜನರ ಬದುಕಿಗೆ ಅಸರೆಯಾಗಿದೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದಸ್ವಾಮಿ ಗ್ಯಾರಂಟಿ ಯೋಜನೆಗಳ ಕೈಪಿಡಿ ಬಿಡುಗಡೆಗೊಳಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಹೇಮಾವತಿ, ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್, ಸದಸ್ಯರಾದ ಪುಷ್ಪಾ ರಮೇಶ್, ಸುಜಾತಾ ಚಂದ್ರಶೇಖರ್, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ತಾಪಂ ಮಾಜಿ ಅಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ, ಜೆ.ಮಂಜೇಗೌಡ, ಆನಂದ್, ಅರುಣಾಕುಮಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net