

ಮುಂಡಗೋಡ: ಪಟ್ಟಣದ ರಜಾಕಿಯಾ ಮಸಿದಿ ಹಿಂಬದಿ ಕಟ್ಟಡದಲ್ಲಿ ದನವನ್ನು ಕತ್ತರಿಸಿದ್ದನ್ನು ವಿರೋಧಿಸಿ ಹಿಂದುಪರ ಸಂಘಟನೆಯವರು ಶಿವಾಜಿವೃತ್ತ ಬಳಿ ಗುರುವಾರ ವಾಹನ ಸಂಚಾರ ತಡೆ ನಡೆಸಿದರು. ದನವನ್ನು ಹತ್ಯೆ ಮಾಡಿದ ಪಾಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.
ಪಟ್ಟಣದ ಹಳೂರ ಸನಿಹ ರಜಾಕಿಯಾ ಮಸಿದಿ ಇದೆ. ಮಸಿದಿ ಹಿಂಬದಿ ಕಟ್ಟಡದಲ್ಲಿ ದೊಡ್ಡ ಗೋವೊಂದನ್ನು ಗುರುವಾರ ಬೆಳಗ್ಗೆ ಹತ್ಯೆ ಮಾಡಲಾಗಿದೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಹಿಂದುಪರ ಸಂಘಟನೆಯವರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ಪಿಎಸ್‌ಐ ಪರಶುರಾಮ ಮಿರ್ಜಗಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಮಸಿದಿಯ ಹಿಂಬದಿ ಕಟ್ಟಡದಲ್ಲಿ ದನವನ್ನು ಕತ್ತರಿಸಿದ್ದು, ಪಶು ಆಸ್ಪತ್ರೆಯ ವೈದ್ಯರಿಂದ ಪರೀಕ್ಷೆ ನಡೆಸಿ ನಂತರ ಹೂಳಲಾಯಿತು.
ಬಿಜೆಪಿ, ಎಬಿವಿಪಿ, ಬಜರಂಗದಳ, ಶ್ರೀರಾಮ ಸೇನೆಯ ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ದನವನ್ನು ಹತ್ಯೆ ಮಾಡಿದವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಬಳಿಕ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.
ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಪ್ರಕಾಶ ಬಡಿಗೇರ, ಶಂಕರ ಲಮಾಣಿ, ವಿಶ್ವನಾಥ ನಾಯರ್, ಅಯ್ಯಪ್ಪ ಭಜಂತ್ರಿ, ಮಂಜುನಾಥ, ರವಿ ಜಿ., ಸುರೇಶ ಕಲ್ಲೊಳ್ಳಿ, ಮಂಜುನಾಥ ಶೇಟ್, ಕೊಟ್ರೇಶ ಹಿರೇಮಠ, ನಿಂಗಪ್ಪ ಕೊಪ್ಪ, ತಂಗಮ್ಮ ಚಿನ್ನನ್, ಬಾಬು ತಳವಾರ, ನಾಗರಾಜ ಹದಳಗಿ, ಭರತ್ ಹದಳಗಿ ಇತರರು ಇದ್ದರು.