ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲು ಕೆಳಗೆ ಬಿದ್ದು ವಸ್ತುಗಳು, ಬಿರುಕು ಬಿಟ್ಟಿವೆ ಗೋಡೆಗಳು

23CBP7
ಚಿಕ್ಕಬಳ್ಳಾಪುರ ತಾಲೂಕಿನ ಪಿಲ್ಲಗುಂಡ್ಲಹಳ್ಳಿಯಲ್ಲಿ ಭೂಕಂಪನಕ್ಕೆ ಪಾತ್ರೆಗಳು ಕೆಳಕ್ಕೆ ಬಿದ್ದಿವೆ.
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿರಂತರವಾಗಿ ಭೂಮಿ ಕಂಪಿಸುತ್ತಿದ್ದು, ಗುರುವಾರ ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಸಾದೇನಹಳ್ಳಿ, ಬೀರಗಾನಹಳ್ಳಿ, ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿಯಲ್ಲಿ ಮಧ್ಯಾಹ್ನ 2.36ರಲ್ಲಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದೆ.

ಬುಧವಾರ ಮಂಡಿಕಲ್ಲು ಹೋಬಳಿ ಕೇಂದ್ರದಿಂದ 1.4 ಕಿ.ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 7.10ರ ಮತ್ತು ಅಡ್ಡಗಲ್ಲು ಗ್ರಾಪಂ ವ್ಯಾಪ್ತಿಯ 1.23 ಕಿ.ಮೀ ವ್ಯಾಪ್ತಿಯಲ್ಲಿ 7.14 ರ ವೇಳೆಯಲ್ಲಿ ಕಂಪನವಾಗಿತ್ತು, ತೀವ್ರತೆಯ ಪ್ರಮಾಣ ಹೆಚ್ಚಾಗದಿರುವುದರಿಂದ ಆತಂಕಪಡುವ ಅವಶ್ಯಕತೆ ಇಲ್ಲ ಎಂಬುದನ್ನು ಜಿಲ್ಲಾಡಳಿತ ಮತ್ತೆ ಹೇಳಿದೆ.

ಈಗಾಗಲೇ ಕಂಪನದ ಬಗ್ಗೆ ಜಿಲ್ಲಾದ್ಯಂತ ಚರ್ಚೆಯಾಗುತ್ತಿದ್ದು ಜನರು ಮನೆಯೊಳಗಿರಲು ಭಯ ಬೀಳುತ್ತಿದ್ದಾರೆ. ಸಾದೇನಹಳ್ಳಿ, ಬೀರಗಾನಹಳ್ಳಿ, ಶೆಟ್ಟಿಗೆರೆಯಲ್ಲಿ ಕಂಪಿಸುತ್ತಿದ್ದಂತೆ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದು, ಪಾತ್ರೆಗಳು ಕೆಳಕ್ಕೆ ಬಿದ್ದಿವೆ. ಗೋಡೆಗಳೂ ಬಿರುಕು ಬಿಟ್ಟಿವೆ. ಆದರೆ, ಯಾವುದೇ ಕಟ್ಟಡಗಳು ಕುಸಿತದ ವರದಿಯಾಗಿಲ್ಲ.

ಓಡಿ ಬಂದ ಶಾಲಾ ಮಕ್ಕಳು: ಭೂಕಂಪನದ ಅನುಭವದಿಂದ ಇಲ್ಲಿನ ಶೆಟ್ಟಿಗೆರೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭಯ, ಗಲಿಬಿಲಿಯಲ್ಲಿ ಹೊರಗೆ ಓಡಿ ಬಂದರು. ಕೆಲ ವಿದ್ಯಾರ್ಥಿಗಳಂತೂ ಅಳಲು ಪ್ರಾರಂಭಿಸಿದರು. ಆಗ ಶಿಕ್ಷಕರು ಧೈರ್ಯ ತುಂಬಿದರು. ಇನ್ನೂ ಗಂಟೆಗಟ್ಟಲೆ ಶಾಲಾ ಆವರಣದಲ್ಲಿ ಉಳಿದುಕೊಂಡ ಮಕ್ಕಳನ್ನು ಮನೆಗಳಿಗೆ ಕಳುಹಿಸಲಾಯಿತು.

ಬೆಂಬಿಡದ ಆತಂಕ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಭೂಕಂಪನದ ಪ್ರಕರಣಗಳು ಹೆಚ್ಚಾಗುತ್ತಿವೆ. ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ, ರಾಸಪಲ್ಲಿ, ವೆಂಕಟರೆಡ್ಡಿಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಾಲ್ಕೈದು ಬಾರಿ, ಬಳಿಕ ಶಿಡ್ಲಘಟ್ಟ ತಾಲೂಕಿನ ಗಾಂಡ್ಲಚಿಂತೆ, ಬಂಡಹಳ್ಳಿ, ಜಿ.ನಕ್ಕಲಹಳ್ಳಿ ಮತ್ತು ಆಟಗೊಲ್ಲಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಭೂಮಿ ನಡುಗಿದ ಅನುಭವ ಉಂಟಾಗಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಮಂಡಿಕಲ್ಲು ಹೋಬಳಿಯ ವ್ಯಾಪ್ತಿಯಲ್ಲಿ ಭೂಮಿ ಕಂಪಿಸುತ್ತಿದ್ದು, ಸ್ಥಳೀಯರಲ್ಲಿ ಅತಂಕ ಹೆಚ್ಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net