

ಯಾದಗಿರಿ: ಮಹಾಶಿವರಾತ್ರಿ ಹಬ್ಬದ ದಿನದಂದು ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದ ಗಲಭೆ ನಿಯಂತ್ರಿಸುವಲ್ಲಿ ಪೊಲೀಸ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಶ್ರೀರಾಮಸೇನೆ ಸಂಘಟನೆ ರಾಜ್ಯಾಧ್ಯಕ್ಷ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಆರೋಪಿಸಿದರು.
ಹಬ್ಬದ ದಿನ ಮಧ್ಯಾಹ್ನವೇ ಘಟನೆ ನಡೆದರೂ ಪೊಲೀಸರು ರಾತ್ರಿ ವೇಳೆ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಶಿವಲಿಂಗದ ಮೇಲೆ ದುಷ್ಕರ್ಮಿ ಮಲ್ಲುರಡ್ಡಿ ಎಂಬಾತ ಕಾಲಿಟ್ಟ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಕೋಟ್ಯಾಂತರ ಹಿಂದುಗ ಳ ಭಾವನೆಗೆ ಧಕ್ಕೆಯಾಗಿದೆ. ಸಧ್ಯ ಆ ಯುವಕರನ್ನು ಬಂಧಿಸಿದ್ದು, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಅಲ್ಲದೆ ಘಟನೆ ನಡೆದ ಮರುದಿನ ಗ್ರಾಮದಲ್ಲಿ ಅನೂಚಾನವಾಗಿ ನಡೆದುಕೊಂಡು ಬರುತ್ತಿದ್ದ ಶ್ರೀ ವೀರಮಹಾಂತೇಶ್ವರ ರಥೋತ್ಸವವನ್ನು ಜಿಲ್ಲಾಡಳಿತ ರದ್ದುಗೊಳಿಸಿದ್ದು, ಧಾಮರ್ಿಕ ಭಾವನೆಗೆ ಧಕ್ಕೆ ತರಿಸಿದೆ ಎಂದು ಕಿಡಿಕಾರಿದರು.
ಶಿವಲಿಂಗದ ಮೇಲೆ ಕಾಲಿಟ್ಟ ಯುವಕನ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬುದು ಮೇಲ್ನೋಟಕ್ಕೆ ಅನುಮಾನ ಮೂಡಿಸುತ್ತಿದೆ. ಈ ಬಗ್ಗೆ ರಾಜ್ಯದ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಜಗದೀಶ ಶೆಟ್ಟರ್ ಗಮನಕ್ಕೆ ತರಲಾಗಿದ್ದು ಸೂಕ್ತ ತನಿಖೆ ನಡೆಸುವಂತೆ ಎಸ್ಪಿ ಮೂಲಕ ಮಠಾಧೀಶರ ಒಕ್ಕೂಟದಿಂದ ಮನವಿ ಸಲ್ಲಿಸಲಾಗುವುದು. ಇನ್ನೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೋರನಗಳ್ಳಿಯ ಶ್ರೀ ವೀರಮಹಾಂತೇಶ್ವರ ಸ್ವಾಮಿಗಳು, ಶ್ರೀ ಶ್ರೀನಿವಾಸ ಸ್ವಾಮಿಗಳು, ಹೆಡಗಿಮದ್ರಿಯ ಶ್ರೀ ಶಾಂತ ಮಲ್ಲಿಕಾರ್ಜುನ, ಸ್ವಾಮಿಗಳು, ಚಿಕ್ಕಮಠದ ಶ್ರೀ ರಾಜೇಂದ್ರ ಸ್ವಾಮಿಗಳು, ಸೊಪ್ಪಿ ಮಠದ ಶ್ರೀ ಚನ್ನವೀರ ಸ್ವಾಮಿಗಳು ವೀರಶೈವ ಮಹಾಸಭೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ವಿಜಯ ಪಾಟೀಲ್ ಇದ್ದರು.