

ಕೇವಲ ಅಲಂಕಾರಿಕವಾಗಿ ಸಂಶೋಧನೆ ನಡೆಸಿದರೆ ಪ್ರಯೋಜನವಿಲ್ಲ. ಗುರಿ, ಸಾಮಾಜಿಕ ನ್ಯಾಯದ ಪ್ರಜ್ಞೆ ಇಲ್ಲದ ಸಂಶೋಧನೆಗಳು ಬೂಸಾ ಆಗುತ್ತವೆ ಎಂದು ಜಾನಪದ ವಿದ್ವಾಂಸ ಹಾಗೂ ಲೇಖಕ ಪ್ರೊ.ಮೊಗಳ್ಳಿ ಗಣೇಶ್ ಹೇಳಿದರು.
ಮೈಸೂರು ವಿವಿ ಜಾನಪದ ಅಧ್ಯಯನ ವಿಭಾಗ ಹಾಗೂ ಮೈಸೂರು ವಿವಿ ಸಂಶೋಧಕರ ಸಂಘದ ವತಿಯಿಂದ ಇಎಂಎಂಆರ್‌ಸಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ದಲಿತ ಜಾನಪದ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಬಹುಸಂಖ್ಯಾತರು ಕೆಳ ಜಾತಿಯವರೇ ಇದ್ದಾರೆ. ನಾವು ಇಷ್ಟಾದರೂ ದಲಿತ ಜಾಗೃತಿಯ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಕನ್ನಡ ವಿವಿಯಲ್ಲಿ ನಾನು ಎಲ್ಲ ತರಗತಿಯಲ್ಲಿ ಈ ವಿಷಯದ ಕುರಿತು ಮಾತನಾಡುತ್ತೇನೆ. ನಾನು ನೆಪಮಾತ್ರಕ್ಕೆ ಜಾನಪದ ಪ್ರಾಧ್ಯಾಪಕನಷ್ಟೆ. ಆದರೆ ನಾನು ಇಡೀ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕ. ಏಕೆಂದರೆ ಎಲ್ಲ ವಿಭಾಗದ ವಿದ್ಯಾರ್ಥಿಗಳು ನನ್ನ ಪಾಠ ಕೇಳಲು ಬರುತ್ತಾರೆ ಎಂದರು.
ಯಾರು ಜಾತಿ ವ್ಯವಸ್ಥೆಯನ್ನು ಆರಾಧಿಸುತ್ತಾರೋ ಅವರೇ ಬಂಧಿತರು. ವಿಮೋಚನೆ ಆಗಬೇಕಿರುವುದು ನಮ್ಮನ್ನು ಬಂಧಿಸಿರುವವರು. ಆ ವಿಷಯದಲ್ಲಿ ನಾವು ಕನಿಕರಪಡಬೇಕು ಎಂದರು.
ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ಕೃತಿ ಬಿಡುಗಡೆಗೊಳಿಸಿದರು. ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಸಿಂಡಿಕೇಟ್ ಸದಸ್ಯ ಡಾ.ನಟರಾಜ್ ಶಿವಣ್ಣ, ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ದಲಿತ ವಿದ್ಯಾರ್ಥಿ ಒಕ್ಕೂಟದ ಪುನೀತ್ ಆಲನಹಳ್ಳಿ, ಜಾಪನದ ವಿಭಾಗದ ಉಪನ್ಯಾಸಕ ಡಾ.ಎಚ್.ಪಿ.ಮಂಜು ಇದ್ದರು.