ಗುಣಮಟ್ಟದ ರಾಗಿ ಪೂರೈಸಿ

30BTP01 - Copy
Published on

ಬೆಟ್ಟದಪುರ: ರಾಗಿ ಮಾರಾಟಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರೈತರು ಲಂಚ ನೀಡಬಾರದು ಎಂದು ಶಾಸಕ ಕೆ.ಮಹದೇವ್ ಹೇಳಿದರು.


ಬೆಟ್ಟದಪುರದ ಎಪಿಎಂಸಿ ಆವರಣದಲ್ಲಿ ಸೋಮವಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ಕೃಷಿ ಮಾರುಕಟ್ಟೆ ಹಾಗೂ ಕೃಷಿ ಮಾರಾಟ ಮಂಡಳಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಗಿ ಮತ್ತು ಭತ್ತ ಖರೀದಿಗೆ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಅಧಿಕಾರಿಗಳು ಲಂಚ ಕೇಳಿದರೆ ಅಥವಾ ತೂಕದಲ್ಲಿ ಮೋಸ ಮಾಡಿದರೆ ನನ್ನ ಗಮನಕ್ಕೆ ತರಬೇಕು ಎಂದು ರೈತರಿಗೆ ಸಲಹೆ ನೀಡಿದರು.


ರಾಜ್ಯ ಕೃಷಿ ಮಾರಾಟ ಮಂಡಳಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ್ ಪಾಟೀಲ್ ಮಾತನಾಡಿ, ಬೆಟ್ಟದಪುರ ಕೇಂದ್ರದಲ್ಲಿ 11 ಸಾವಿರ ರೈತರು ರಾಗಿ ಮಾರಾಟಕ್ಕಾಗಿ ನೋಂದಣಿ ಮಾಡಿಸಿದ್ದಾರೆ. ಹೊಸ ಆದೇಶದ ಪ್ರಕಾರ ರೈತರು ಬೆಳೆದ ರಾಗಿಯನ್ನು ಮಾರುಕಟ್ಟೆ ಆವರಣದಲ್ಲಿ ರಾಶಿ ಮಾಡಿ, ಸರ್ಕಾರದಿಂದ ಕೊಡುವ ಚೀಲದಲ್ಲಿ ತುಂಬಿಸಿ, ತೂಕ ಮಾಡಬೇಕಿದೆ, ಪ್ರತಿಯೊಬ್ಬ ರಾಗಿ ಮಾರಾಟಗಾರ ಇದನ್ನು ಪಾಲಿಸಲೇಬೇಕು. ಗುಣಮಟ್ಟದ ರಾಗಿಯನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಹೊಸ ನಿಯಮಗಳು ಜಾರಿಗೆ ಬಂದಿದ್ದು, ರೈತರು ಸಹಕರಿಸಬೇಕು ಎಂದರು.


ಹೊಸ ನೀತಿಗೆ ರೈತರ ಅಸಮಾಧಾನ: ರಾಗಿಯನ್ನು ಮಾರಾಟ ಕೇಂದ್ರಕ್ಕೆ ತಂದು ರಾಶಿ ಮಾಡಿ ಮತ್ತೆ ಅವರು ಕೊಡುವ ಚೀಲಕ್ಕೆ ತುಂಬಿಕೊಡುವುದಕ್ಕೆ ಕಷ್ಟವಾಗುತ್ತದೆ. ಈ ರೀತಿಯಾದರೆ ಮನೆಯಲ್ಲಿ ಇರುವ ಎಲ್ಲರೂ ಬಂದು ಕೆಲಸ ಮಾಡಿಕೊಂಡು ಇರಬೇಕಾಗುತ್ತದೆ. ನಾವು ತರುವ ಚೀಲದಲ್ಲೇ ತೂಕ ಮಾಡಿ ಮೊದಲಿನಂತೆ ತೆಗೆದುಕೊಳ್ಳಬೇಕು. ಅದರಲ್ಲೇ ಗುಣಮಟ್ಟ ಪರೀಕ್ಷೆ ಮಾಡಿಸಿ ಹಾಗೂ ನಿಯಮವನ್ನು ಬೇಗ ಹಿಂಪಡೆಯಬೇಕು ಎಂದು ಕೆಲ ರೈತರು ಪಟ್ಟು ಹಿಡಿದು ಅಸಮಾಧಾನ ವ್ಯಕ್ತಪಡಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಮಹದೇವ್, ಬೇರೆ ರಾಜ್ಯಗಳಲ್ಲಿ ನಮ್ಮ ರಾಗಿ ತಿರಸ್ಕಾರವಾಗುತ್ತಿರುವುದು ಹಾಗೂ ಲಂಚದ ಹಾವಳಿ ತಪ್ಪಿಸುವ ಹಿನ್ನೆಲೆಯಲ್ಲಿ ಸರ್ಕಾರ ಈ ಬಾರಿ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಈ ನಿರ್ಧಾರದಿಂದ ರೈತರಿಗೆ ಕಷ್ಟವಾಗಲಿದೆ ಎಂಬ ಮುಂದಾಲೋಚನೆಯಿಂದ ಸಹಕಾರ ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ. ಅಲ್ಲದೆ ರಾಗಿ ಮಾರಾಟದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಬಾರಿಯ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ಎಂದರು,


ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ, ಸದಸ್ಯ ರಾಜಶೇಖರ್, ಎಪಿಎಂಸಿ ಕಾರ್ಯದರ್ಶಿ ರೇವತಿ, ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿದ್ಯಾಶಂಕರ್, ರೈತ ಘಟಕದ ಅಧ್ಯಕ್ಷ ಬಿ.ಜೆ.ದೇವರಾಜು, ವಿವಿಧ ಸೊಸೈಟಿಗಳ ಅಧ್ಯಕ್ಷರಾದ ಪಟೇಲ್ ನಟೇಶ್, ಸೈಯದ್ ಹಸಿಬ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಆಹಾರ ಶಿರಸ್ತೇದಾರ್ ಸಣ್ಣಸ್ವಾಮಿ, ಮಂಜುನಾಥ್, ಖರೀದಿ ಕೇಂದ್ರದ ಅಧಿಕಾರಿ ಅಕ್ಷಯ್, ಮುಖಂಡರಾದ ರಘುನಾಥ್, ಶಂಕರೇಗೌಡ, ಕರಡಿಪುರ ಕುಮಾರ್, ದೀಪು ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net