ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ

BLY- 4-6
ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು ಗುರುವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ವಿಮ್ಸ್ ನಿರ್ದೇಶಕ ಡಾ.ಬಿ.ಗಂಗಾಧರಗೌಡ, ಮುಖ್ಯ ಆಡಳಿತಾಧಿಕಾರಿ ಸಿದ್ದರಾಮೇಶ್ವರ, ಸೂಪರಿಂಡೆಂಟ್ ಡಾ.ಕಾಸ ಸೋಮಶೇಖರ್ ಮತ್ತಿತರರಿದ್ದರು.
Published on

ಬಳ್ಳಾರಿ: ಇಲ್ಲಿನ ವಿಮ್ಸ್ ಆಸ್ಪತ್ರೆಗೆ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು ಗುರುವಾರ ಭೇಟಿ ನೀಡಿ, ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಹಾಗೂ ಬೋಧನಾ ಕಟ್ಟಡದ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ವಿಮ್ಸ್ ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ಅನುದಾನದ ಅಡಿಯಲ್ಲಿ ಸಾಕಷ್ಟು ಕಾಮಗಾರಿಗಳು ನಡೆದಿವೆ. ಜಿಂದಾಲ್ ಮತ್ತು ಕಿದ್ವಾಯಿ ಆಸ್ಪತ್ರೆಯ ಸಹಕಾರದಲ್ಲಿ ವಿಶೇಷ ವಾರ್ಡ್‌ಗಳ ನಿರ್ಮಾಣ ನಡೆದಿದೆ. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ವಿಮ್ಸ್ ನಿರ್ದೇಶಕ ಡಾ.ಬಿ.ಗಂಗಾಧರಗೌಡ ಮಾತನಾಡಿ, ಟ್ರಾಮಾಕೇರ್ ಆಸ್ಪತ್ರೆಯಲ್ಲಿ ಕಿದ್ವಾಯಿ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ 200 ಹಾಸಿಗೆಗಳ ಪ್ರತ್ಯೇಕ ಕ್ಯಾನ್ಸರ್ ವಾರ್ಡ್, ಜಿಂದಾಲ್ ಕಂಪನಿಯ ಆರ್ಥಿಕ ನೆರವಿನಲ್ಲಿ ನಿರ್ಮಾಣವಾಗುತ್ತಿರುವ 500 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆಯ ಕಾಮಗಾರಿಗಳನ್ನು ತೋರಿಸಿ, ಜನರಿಗೆ ಸಿಗುವ ವೈದ್ಯಕೀಯ ಸೌಲಭ್ಯಗಳ ಕುರಿತು ವಿವರಣೆ ನೀಡಿದರು.

ಈ ವೇಳೆ ಹೊಸ ಕಟ್ಟಡದಲ್ಲಿ ನಿರ್ಮಾಣವಾಗಿರುವ ಆಪರೇಷನ್ ಥಿಯೇಟರ್, ಐಸಿಯು ವಾರ್ಡ್, ಮಕ್ಕಳ ವಾರ್ಡ್, ಎಮರ್ಜೆನ್ಸಿ ವಾರ್ಡ್, ಎಂಆರ್‌ಐ ಮತ್ತು ಸಿಟಿ ಸ್ಕಾೃನಿಂಗ್ ಕೇಂದ್ರ, ಔಷಧ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದರು. ಆಸ್ಪತ್ರೆಯ ಒಳ ಮತ್ತು ಹೊರಭಾಗದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ವಿಮ್ಸ್‌ನ ಮುಖ್ಯ ಆಡಳಿತಾಧಿಕಾರಿ ಸಿದ್ದರಾಮೇಶ್ವರ, ಸೂಪರಿಂಡೆಂಟ್ ಡಾ.ಕಾಸ ಸೋಮಶೇಖರ್ ಹಾಗೂ ವೈದ್ಯ ಡಾ.ದಿವಾಕರ್ ಗಡ್ಡಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net