

ಬಂಗಾರಪೇಟೆ ಗ್ರಾಮಾಂತರ: ಹುಲಿಬೆಲೆ ಗ್ರಾಮದಲ್ಲಿ ಊರಹಬ್ಬದ ದಿನವೇ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಮ್ಮಿಕೊಂಡಿರುವುದನ್ನು ವಿರೋಧಿಸಿ ಗುಂಪು ಸಭೆ ಮಾಡಬಾರದೆಂದು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಎರಡು ಗಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಬಂಗಾರಪೇಟೆ ತಾಲೂಕಿನ ಹುಲಿಬೆಲೆಯಲ್ಲಿ ಹಲ ವರ್ಷಗಳ ನಂತರ ಗ್ರಾಮದ ಕೆರೆ ಕೋಡಿ ಹರಿದಿರುವುದರಿಂದ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಪಕ್ಷಭೇದವಿಲ್ಲದೆ ಊರಹಬ್ಬ ಆಚರಿಸಿ ಭಾನುವಾರ ಕೆರೆಗೆ ದೀಪ ಬಿಡಲು ಮುಂದಾಗಿದ್ದರು.
ಆದರೆ ಕಾಂಗ್ರೆಸ್ ಮುಖಂಡರು ಗ್ರಾಮದಲ್ಲಿ ಗಾಂಧಿ ಗ್ರಾಮಸ್ವರಾಜ್ಯ ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಿರುವುದಕ್ಕೆ ಗ್ರಾಮಸ್ಥರ ಕಣ್ಣು ಕೆಂಪಾಗಿತ್ತು.
ಕಾಂಗ್ರೆಸ್ ಸಭೆ ಆರಂಭವಾಗುತ್ತಿದ್ದಂತೆ ಗುಂಪೊಂದು ಗ್ರಾಮದಲ್ಲಿ ಎಲ್ಲರೂ ಹಬ್ಬ ಆಚರಿಸಲು ನಿರ್ಧರಿಸಿ ಕಾರ್ಯಕ್ರಮಕ್ಕೆ ಯಾವುದೇ ಪಕ್ಷದ ಮುಖಂಡರನ್ನು ಆಹ್ವಾನಿಸಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ ಈಗ ಕಾಂಗ್ರೆಸ್ ಸಭೆ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಸಭೆ ರದ್ದುಪಡಿಸಿ ಇಲ್ಲವೇ ಹಬ್ಬ ನಿಲ್ಲಿಸಿ ಎಂದು ಪಟ್ಟುಹಿಡಿದು ಗಲಾಟೆ ಆರಂಭಿಸಿದರು. ಇದರಿಂದ ಕೆರಳಿದ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಶಾಸಕ ಎಸ್.ಎನ್. ನಾರಾಯಣಸ್ವಾಮಿ ವೇದಿಕೆಯಿಂದ ಇಳಿದು ಬಂದು ಸಮಾಧಾನಪಡಿಸಲು ಯತ್ನಿಸಿದರೂ ಫಲ ಸಿಗಲಿಲ್ಲ.
ವಿರೋಧದ ನಡುವೆಯೂ ಎಂಎಲ್‌ಸಿ ಅನಿಲ್ ಕುಮಾರ್ ಹಾಗೂ ಶಾಸಕ ಎಸ್.ಎನ್. ನಾರಾಯಣಸ್ವಾಮಿ ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಿ ಹೊರ ನಡೆದರು.
ಸಭೆ ಮುಗಿಯುತ್ತಿದ್ದಂತೆ ಮತ್ತೆ ಎರಡು ಗುಂಪುಗಳ ನಡುವೆ ಮಾತಿನ ವಾಗ್ದಾಳಿ ಮುಂದುವರಿಯಿತು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಮುಂದಾಗಿದ್ದೂ ಗ್ರಾಮಸ್ಥರ ಆಕ್ರೋಶಕ್ಕೆ ಮತ್ತೊಂದು ಕಾರಣವಾಗಿತ್ತು. ಗಲಾಟೆ ನಡೆಯುತ್ತಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಗಲಾಟೆ ನಿಲ್ಲಿಸಲು ಮುಂದಾಗಿಲ್ಲ.