ಗುಂಪು ಮನೆಯತ್ತ ಕೆಎಚ್‌ಬಿ ಚಿತ್ತ

khb
Published on

ನಗರದ ನಿವೇಶನಾಕಾಂಕ್ಷಿಗಳಿಗೆ ಇಲ್ಲೊಂದು ಸಿಹಿ ಸುದ್ದಿ...! ನಗರದಲ್ಲಿ ಕರ್ನಾಟಕ ಗೃಹ ಮಂಡಳಿಯು ಗುಂಪು ವಸತಿ ಯೋಜನೆಯಡಿ ಮೊದಲ ಬಾರಿಗೆ ಮನೆಗಳನ್ನು ನಿರ್ಮಿಸಲು ಮುಂದಾಗಿದೆ.

ಈ ಮೊದಲು ಗುಂಪು ಮನೆಗಳನ್ನು ನಿರ್ಮಿಸಲು ಯೋಜಿಸಿದ್ದ ಮುಡಾದ ಯೋಜನೆ ನನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಕೆಎಚ್‌ಬಿ ಗುಂಪು ಮನೆಗಳನ್ನು ನಿರ್ಮಿಸಲು ಮುಂದಾಗಿರುವುದು ನಿವೇಶನಾಕಾಂಕ್ಷಿ ಮುಡಾದಲ್ಲಿ ಹಲವು ದಶಕಗಳಿಂದ ಅರ್ಜಿ ಸಲ್ಲಿಸಿ, ನಿವೇಶನ ಸಿಗದೆ ಲಕ್ಷಕ್ಕೂ ಅಧಿಕ ಮಂದಿ ಕಾಯುತ್ತಿದ್ದಾರೆ. ಮೈಸೂರಿನಲ್ಲಿ ನಿವೇಶನ ಸಿಗದೆ ಇರುವ ಮಟ್ಟಿಗೆ ನಗರ ಬೆಳೆದಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ನಿವೇಶನ ಗಗನ ಕುಸುಮವಾಗಿದೆ. ಈ ಹಿನ್ನೆಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಸ್ವಂತ ಸೂರಿನ ಕನಸನ್ನು ನನಸು ಮಾಡುವ ಉದ್ದೇಶದಿಂದ ಕೆಎಚ್‌ಬಿ ಈ ಯೋಜನೆಗೆ ಕೈ ಹಾಕಿದೆ.

99 ಕೋಟಿ ರೂ.ವೆಚ್ಚದಲ್ಲಿ ಜಿ ಪ್ಲಸ್ 7 ಮಾದರಿಯಲ್ಲಿ ಬರೋಬ್ಬರಿ 192 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದು, ಮನೆಗಳಿಗೆ ಬೇಡಿಕೆ ಇದೆಯೇ ಎಂಬುದರ ಬಗ್ಗೆ ಸಮೀಕ್ಷೆ ನಡೆಸುತ್ತಿದೆ.

ನಗರದ ಶ್ರೀರಾಂಪುರ ರಿಂಗ್ ರಸ್ತೆಯಿಂದ 2.5 ಕಿ.ಮೀ. ದೂರದಲ್ಲಿರುವ ಜಯಪುರ ಹೋಬಳಿ ಕೆಂಚಲಗೂಡು ಗ್ರಾಮದಲ್ಲಿನ ಕೆಎಚ್‌ಬಿ ವಸತಿ ಬಡಾವಣೆಯಲ್ಲಿ ಹೆರಿಟೇಜ್ ಹೈಟ್ಸ್ ಹೆಸರಿನಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಯೋಜನೆ ರೂಪಿಸಿದೆ.

ಈಗಾಗಲೇ ಗ್ರಾಮದಲ್ಲಿನ 180 ಎಕರೆ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಬಡಾವಣೆಯನ್ನು ಅಭಿವೃದ್ಧಿಪಡಿಸಿ 2397 ನಿವೇಶನಗಳನ್ನು ಮಾರಾಟ ಮಾಡಿರುವ ಗೃಹ ಮಂಡಳಿಯು ಬಡಾವಣೆ ಜಾಗದಲ್ಲಿ ಬೆಂಗಳೂರು ಮಾದರಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸಲು 1.5 ಎಕರೆ ಪ್ರದೇಶವನ್ನು ಗುರುತಿಸಿದೆ. ‘ಮೈಸೂರಿನಲ್ಲಿ ಅಪಾರ್ಟ್‌ಮೆಂಟ್ ಸಂಸ್ಕೃತಿ ಹೆಚ್ಚಾದ ಹಿನ್ನೆಲೆಯಲ್ಲಿ ಜನತೆ ಕೂಡ ಫ್ಲ್ಯಾಟ್ ವಾಸಕ್ಕೆ ಹೊಂದಿಕೊಳ್ಳುತ್ತಿದ್ದಾರೆ. 8 ವರ್ಷದ ಬಳಿಕ ವಸತಿ ಸಮುಚ್ಛಯ ಯೋಜನೆಗೆ ಜೀವ ಬಂದಿದ್ದು, 99 ಕೋಟಿ ರೂ.ವೆಚ್ಚದಲ್ಲಿ ಹೆರಿಟೇಜ್ ಹೈಟ್ಸ್ ಹೆಸರಿನಲ್ಲಿ ವಸತಿ ಸಮುಚ್ಛಯ ನಿರ್ಮಿಸಲಾಗುತ್ತಿದೆ’ ಎಂದು ಕೆಎಚ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ.

ವಸತಿ ಸಮುಚ್ಛಯದಲ್ಲಿ ಸೌಲಭ್ಯಗಳು:

ಕ್ಲಬ್‌ಹೌಸ್, ಪಾರ್ಟಿ ಹಾಲ್, ಜಿಮ್, ಗ್ರಂಥಾಲಯ, ಕ್ರೀಡಾಂಗಣ, ಪಾರ್ಕಿಂಗ್, ಸೋಲಾರ್, ಈಜುಕೊಳ, ಮಕ್ಕಳ ಆಟದ ಮೈದಾನ, ಉದ್ಯಾನ, ಕುಡಿಯುವ ನೀರು, ಮಳೆ ನೀರು ಕೊಯ್ದು, ಭದ್ರತಾ ವ್ಯವಸ್ಥೆ ಇರಲಿದೆ. ಅಂದಾಜು 2 ಬಿಎಚ್‌ಕೆ ಫ್ಲ್ಯಾಟ್‌ಗೆ -49.46 ಲಕ್ಷ ರೂ., 3 ಬಿಎಚ್‌ಕೆ ಫ್ಲ್ಯಾಟ್‌ಗೆ -63.09 ಲಕ್ಷ ರೂ.ತಗಲಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net