ಗಿರಿಜಿಲ್ಲೆಗೂ ಅಪ್ಪಳಿಸಿದ ನಿವಾರ್

NIWAR
Published on

ಯಾದಗಿರಿ: ಬಂಗಾಳಕೊಲ್ಲಿಯಲ್ಲಿ ಸೃಷ್ಠಿಯಾದ ನಿವಾರ್ ಚಂಡಮಾರುತದ ಎಫೆಕ್ಟ್ ಗಿರಿಜಿಲ್ಲೆಗೆ ತಟ್ಟಿದ್ದು ಶುಕ್ರವಾರ ಬೆಳಗ್ಗೆಯಿಂದ ಜಿಟಿಜಿಟಿ ಮಳೆ ಸುರಿಯಿತು.
ಗುರುವಾರದಿಂದಲೇ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿದ್ದು, ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೂ ಮಳೆ ಸುರಿಯಿತು. ಈ ಬಾರಿ ಜಿಲ್ಲೆಯಲ್ಲಿ ಚಳಿ ಹೆಚ್ಚಾಗತೊಡಗಿದ್ದು, ಇದಕ್ಕೆ ಮಳೆಯೂ ಸಾಥ್ ಕೊಟ್ಟ ಕಾರಣ ಜನತೆ ಗಡಗಡ ನಡುಗುವಂತಾಯಿತು. ಕೆಲಸದ ನಿಮಿತ್ತ ಹೊರಗಡೆ ಹೊರಟ ಜನತೆ ಮಳೆಯಿಂದಾಗಿ ವಾಪಸ್ ಮನೆಯತ್ತ ಮುಖ ಮಾಡಿದ್ದು ಕಂಡು ಬಂದಿತು.

ಚಳಿಗೆ ಕರೊನಾ ಸೋಂಕು ಮತ್ತಷ್ಟು ಹೆಚ್ಚಾಗಲಿದೆ ಎಂದು ಜನತೆ ಆತಂಕಗೊಂಡಿದ್ದು, ಮಳೆ ಸುರಿದ ಕಾರಣ ನಗರದಲ್ಲಿನ ಪ್ರಮುಖ ಬೀದಿಗಳಲ್ಲಿ ಜನಸಂದಣಿ ಹೆಚ್ಚಾಗಿ ಕಂಡು ಬರಲಿಲ್ಲ. ಇನ್ನೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರೈತರು ಬೆಳೆದ ಭತ್ತ ರಾಶಿ ಹಂತದಲ್ಲಿರುವ ಕಾರಣ ಅಕಾಲಿಕ ಮಳೆ ಧಾನ್ಯಗಳನ್ನು ನೀರು ಹಾಳು ಮಾಡುವ ಆತಂಕ ಅನ್ನದಾತರಲ್ಲಿ ಮನೆ ಮಾಡಿತ್ತು. ಭತ್ತದ ರಕ್ಷಣೆಗಾಗಿ ಹಳ್ಳಿಗಳಲ್ಲಿ ರೈತರು ಬೃಹದಾಕಾರದ ಪ್ಲಾಸ್ಟಿಕ್ ತಾಟಪಲ್ಗಳಿಗೆ ಮೊರೆ ಹೋಗಿದ್ದು, ಕೈಗೆ ಬಂದ ತುತ್ತು ರಕ್ಷಣೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತು.

ಮಳೆಯಿಂದಾಗಿ ಶೀಥ ವಾತಾವರಣ ಮುಂದುವರೆದ ಹಿನ್ನೆಲೆಯಲ್ಲಿ ಜನತೆ ಅಗತ್ಯ ಬಿದ್ದರೆ ಮಾತ್ರ ಮನೆ ಬಿಟ್ಟು ಹೊರಗಡೆ ಬರಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಲ್ಲದೆ ಪುಟ್ಟ ಮಕ್ಕಳಿಗೆ ತಣ್ಣನೆಯ ಹಾಗೂ ಬೇಕರಿ ಪದಾರ್ಥ, ನೀಡದಂತೆ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net