ಗಿರಿಜನರಿಗೆ ಸಿಗದ ಸಾಗುವಳಿ ಪತ್ರ

HUN-AUG-24-1(SC ST MEETING)
Published on

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ತೆಕ್ಕಲಹಾಡಿಯ ಗಿರಿಜನರಿಗೆ ಹಂಚಿಕೆ ಮಾಡಿರುವ ಭೂಮಿಯ ಸಾಗುವಳಿ ಪತ್ರವನ್ನು ವಿತರಿಸುವಂತೆ ಉಚ್ಚ ನ್ಯಾಯಾಲಯ ಆದೇಶಿಸಿ 16 ವರ್ಷಗಳೇ ಸಂದರೂ ತಾಲೂಕು ಆಡಳಿತ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಮುಖಂಡ ಚಿಕ್ಕಹುಣಸೂರು ರಾಜು ಬೇಸರಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ/ ಪಂಗಡಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 2006ರಲ್ಲಿ ತೆಕ್ಕಲಹಾಡಿಯ 57 ಕುಟುಂಬಗಳಿಗೆ ಸರ್ಕಾರ ಕಾಡವಡ್ಡರಗುಡಿ ಸರ್ವೇ ನಂ.33ರಲ್ಲಿ ನೀಡಿರುವ 114 ಎಕರೆ ಭೂಮಿ ನೀಡಿದ್ದು, ಅವರಿಗೆ ಸಾಗುವಳಿ ಪತ್ರ ನೀಡಲು ಹೈಕೋರ್ಟ್ 2006ರಲ್ಲಿ ಆದೇಶಿಸಿದೆ. ಆದರೆ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕುರಿತು 2012ರಲ್ಲಿ ಗಿರಿಜನರು ಅಂದಿನ ಹುಣಸೂರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದಾಗ ಅಂದಿನ ತಹಸೀಲ್ದಾರ್‌ರಿಗೆ ಸಾಗುವಳಿ ಪತ್ರ ನೀಡಲು ಆದೇಶಿಸಿದ್ದರು. ಇಷ್ಟಾಗಿಯೂ ಇಂದಿನವರೆಗೂ ಗಿರಿಜನರಿಗೆ ತಾಲೂಕು ಆಡಳಿತ ನ್ಯಾಯ ದೊರಕಿಸಿಕೊಡುತ್ತಿಲ್ಲ. ಭೂಮಿ ಇದ್ದರೂ ಗಿರಿಜನರು ಇತರರ ಭೂಮಿಯಲ್ಲಿ ಕೂಲಿ ಮಾಡುವಂತಾಗಿದೆ ಎಂದು ದೂರಿದರು.

ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮಾತನಾಡಿ, ಪ್ರಕರಣ ಕುರಿತು ಪರಿಶೀಲನೆ ನಡೆಸುತ್ತೇನೆ. ಎಲ್ಲ 57 ಕುಟುಂಬಗಳು ಫಾರ್ಮ್.ನಂ.57ರಡಿ ಮತ್ತೆ ಅರ್ಜಿ ಸಲ್ಲಿಸಿದರೆ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಚರ್ಚಿಸಿ ಶೀಘ್ರ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಸ್ಮಶಾನಗಳ ದುರ್ಗತಿ: ತಾಲೂಕಿನ ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ ಸ್ಮಶಾನಗಳ ಅಭಿವೃದ್ಧಿಯಾಗಿಲ್ಲ. ಕೆಲವೆಡೆ ನಿರ್ಮಾಣವೂ ಆಗಿಲ್ಲ. ಇದರಿಂದ ಬಡಜನರು ಸಂಕಷ್ಟದಲ್ಲಿದ್ದು, ತಾಲೂಕು ಆಡಳಿತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಸಭೆಯಲ್ಲಿ ದಲಿತ ಮುಖಂಡರು ಒಕ್ಕೊರಲಿನಿಂದ ಆರೋಪಿಸಿದರು.
ಹನಗೋಡು ಹೋಬಳಿ ವ್ಯಾಪ್ತಿಯ ದೊಡ್ಡಹೆಜ್ಜೂರು, ಭರತವಾಡಿ, ಹಿಂಡುಗುಡ್ಲು, ದಾಸನಪುರ ಮುಂತಾದ ಗ್ರಾಮಗಳಲ್ಲಿ ಇಂದಿಗೂ ಸ್ಮಶಾನಗಳಿಲ್ಲ. ಶವಸಂಸ್ಕಾರ ನಡೆಸಲಾಗದ ಪರಿಸ್ಥಿತಿ ಇದೆ ಎಂದು ದೊಡ್ಡಹೆಜ್ಜೂರು ನಾಗೇಶ್, ಕಿರಂಗೂರು ಸ್ವಾಮಿ ಮುಂತಾದವರು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯೆ ಪ್ರವೇಶಿಸಿದ ತಹಸೀಲ್ದಾರ್, ಇನ್ನೊಂದು ತಿಂಗಳಲ್ಲಿ ಸ್ಮಶಾನಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಅಂಬೇಡ್ಕರ್ ಭಾವಚಿತ್ರ ಇಟ್ಟಿಲ್ಲ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನದಂದು ತಾಲೂಕಿನ ಹಲವು ಶಾಲೆಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದೆ ಸ್ವಾತಂತ್ರ ದಿನ ಆಚರಿಸಲಾಗಿದೆ. ತಾಲೂಕಿನ ಆದರ್ಶ ವಿದ್ಯಾಲಯ, ಹಂದನಹಳ್ಳಿ ಮತ್ತು ಕಣಗಾಲು ಪ್ರೌಢಶಾಲೆ, ಬೀರನಹಳ್ಳಿ ಮತ್ತು ನಾಗನಹಳ್ಳಿ ಕಿರಿಯ ಪ್ರಾಥಮಿಕ ಶಾಲೆ, ರತ್ನಪುರಿಯ ಸಾಧನಾಪುರ ಶಾಲೆ ಹಾಗೂ ಹನಗೋಡು ಹೋಬಳಿಯ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸದೇ ಆಚರಿಸಲಾಗಿದೆ. ಆ ಮೂಲಕ ಸಂವಿಧಾನಶಿಲ್ಪಿಗೆ ಅಪಮಾನ ಮಾಡಲಾಗಿದೆ. ಶಿಕ್ಷಕರಾಗಿ ಅಶಿಕ್ಷಿತರರಂತೆ ವರ್ತಿಸಿರುವುದು ಸರಿಯೇ? ತಾಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆಗೆ ವಿಷಯ ತಿಳಿದಿಲ್ಲವೇ ಎಂದು ಕಿರಂಗೂರು ಸ್ವಾಮಿ ಮತ್ತು ದೊಡ್ಡಹೆಜ್ಜೂರು ನಾಗೇಶ್ ಪ್ರಶ್ನಿಸಿದರು.

ಕ್ಷೇತ್ರಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿ, ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆ.16, 20 ಮತ್ತು 24ರಂದು ದೂರುಗಳನ್ನು ಹಲವರಿಂದ ಸ್ವೀಕರಿಸಲಾಗಿದೆ. ದೂರುದಾರರಿಂದ ಸೂಕ್ತ ದಾಖಲೆಗಳನ್ನು ಕೋರಲಾಗಿದೆ. ಶಿಕ್ಷಣ ಸಂಯೋಜಕರಿಂದ ವರದಿ ಕೋರಿದ್ದು, ಎಲ್ಲವನ್ನೂ ಒಗ್ಗೂಡಿಸಿ 3 ದಿನಗಳೊಳಗೆ ಉಪನಿರ್ದೇಶಕರಿಗೆ ಮಾಹಿತಿ ರವಾನಿಸಲಾಗುವುದು ಎಂದರು.

ಲ್ಯಾಂಪ್ಸ್ ಸೊಸೈಟಿ ಅಕ್ರಮಗಳ ತನಿಖೆಯಾಗಬೇಕೆಂದು ಬಲ್ಲೇನಹಳ್ಳಿ ಕೆಂಪರಾಜು ಒತ್ತಾಯಿಸಿದರು.ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್, ತಾಪಂ ಇಒ ಬಿ.ಕೆ.ಮನು, ಮುಖಂಡರಾದ ನಿಂಗರಾಜ ಮಲ್ಲಾಡಿ, ಅಪ್ಪಣ್ಣ, ಅತ್ತಿಕುಪ್ಪೆ ರಾಮಕೃಷ್ಣ ಇತರ ಅಧಿಕಾರಿಗಳು ಇದ್ದರು.

24ಊಓ1: ಹುಣಸೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಪಂಗಡದ ಹಿತರಕ್ಷಣಾ ಸಮಿತಿ ಸಭೆ ನಡೆಸಲಾಯಿತು. ತಹಸೀಲ್ದಾರ್ ಡಾ.ಯು.ಎಸ್.ಅಶೋಕ್, ಬಿ.ಕೆ.ಮನು, ಮೋಹನ್‌ಕುಮಾರ್, ರೇವಣ್ಣ ಇತರರಿದ್ದರು.
=-=-=-=-=-=-=-=-=-=-=-=-=-=-=-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net