

ಚನ್ನರಾಯಪಟ್ಟಣ : ಅರಣ್ಯ ಇಲಾಖೆ ಪ್ರತಿವರ್ಷ ಮುಂಗಾರು ಆರಂಭದಲ್ಲಿ ನೆಡುವ ಸಾವಿರಾರು ಗಿಡಗಳನ್ನು ನಂತರದ ದಿನಗಳಲ್ಲಿ ಅವುಗಳಿಗೆ ನೀರುಣಿಸಿ ಪೋಷಿಸಿದರೆ ನೈಸರ್ಗಿಕ ಅಸಮತೋಲನ ಹೋಗಲಾಡಿಸಿ ಉತ್ತಮ ಪರಿಸರ ಸೃಷ್ಟಿಸಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ತಾಲೂಕು ಆಡಳಿತ, ಭೂಮಿ ಉಳಿಸಿ ಆಂದೋಲನ ಸಮಿತಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಔಷಧೀಯ ಗಿಡಗಳನ್ನು ನೆಟ್ಟು, ಪಟ್ಟಣದಲ್ಲಿ ಬೇಡಿಕೆ ಇಡುವವರ ಮನೆಗಳ ಮುಂದೆ ಉಚಿತವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಲಯ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯು ಪ್ರತಿ ವರ್ಷ ಮೇ ತಿಂಗಳ ಅಂತ್ಯದಿಂದ ಜುಲೈ ತಿಂಗಳವರೆಗೆ ಸರ್ಕಾರಿ ಜಮೀನು, ರಸ್ತೆ ಬದಿ, ನದಿ ಪಾತ್ರ, ಗೋಮಾಳ, ಮೀಸಲು ಅರಣ್ಯ ಪ್ರದೇಶ ಸೇರಿದಂತೆ ಇತರ ಕಡೆಗಳಲ್ಲಿ ಗಿಡಗಳನ್ನು ನೆಡುತ್ತದೆ. ಮುಂಗಾರು ಆರಂಭದಲ್ಲಿ ನೆಟ್ಟ ಗಿಡಗಳಿಗೆ ನವೆಂಬರ್ ತಿಂಗಳವರೆಗೆ ಮಳೆಯೇ ಆಸರೆಯಾಗಿದ್ದು, ನಂತರದ ದಿನಗಳಲ್ಲಿ ಅವುಗಳ ಪೋಷಣೆಗೆ ಅಧಿಕಾರಿಗಳು ಆಸಕ್ತಿ ವಹಿಸಬೇಕು ಎಂದರು.
ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಇತರರಿಗೂ ಗಿಡ ನೆಡುವಂತೆ ಪ್ರೋತ್ಸಾಹಿಸಬೇಕು. ಇದು ಪರಿಸರವನ್ನು ಉಳಿಸುವ ಮಾರ್ಗ. ಪ್ರತಿಯೊಬ್ಬರೂ ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲಗಳನ್ನು ಬಳಸಬೇಕು. ಮರುಬಳಕೆ ವಸ್ತುಗಳನ್ನು ಉಪಯೋಗಿಸುವುದರೊಂದಿಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಗಿಡಮರಗಳನ್ನು ಹೆಚ್ಚು ಬೆಳೆಸುವುದರಿಂದ ಬಿಸಿಲ ಬೇಗೆ ಕಡಿಮೆಯಾಗಿ ಜನರಿಗೆ ಉತ್ತಮ ಆಮ್ಲಜನಕ ದೊರೆಯಲಿದೆ. ಪರಿಸರದ ಸೌಂದರ್ಯವೂ ಹೆಚ್ಚಾಗಲಿದೆ. ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಮನೆಯ ಸುತ್ತಲೂ ಗಿಡಗಳನ್ನು ಬೆಳೆಸುವುದಲ್ಲದೇ ಮನೆಯಲ್ಲಿ ಬಳಸಿದ ನೀರನ್ನು ಮರು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಪರಿಸರ ಪ್ರೇಮಿ ಚ.ನಾ.ಅಶೋಕ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ ಮಹೇಶ್ ಮಾತನಾಡಿದರು. ಎಸಿಎಫ್ ಖಲಂದರ್, ಅರಸೀಕೆರೆ ಎಸಿಎಫ್ ತೇಜಸ್ವಿನಿ ತಾಲೂಕಿನ ಪ್ರೊಬೇಷನರಿ ಎಸಿಎಫ್ ಮಹಾಲಕ್ಷ್ಮೀ, ಜಿಲ್ಲಾ ಆಯುರ್ವೇದ ಅಧಿಕಾರಿ ರಾಮಚಂದ್ರ, ತಾಲೂಕಿನ ಆಯುರ್ವೇದ ವೈದ್ಯ ತ್ರಿವೇಣಿ, ಭೂಮಿ ಉಳಿಸಿ ಆಂದೋರೋಣ ಸಮಿತಿಯ ಸಿಎನ್ ಮನೋಹರ್, ಹೂ.ವಿ.ಸಿದ್ದೇಶ್, ಸಚಿನ್, ಮಹಾದೇವ್, ರಾಜ್ಯಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸರ್ಕಾರಿ ಆಯುರ್ವೇದ ಆಸ್ಪತ್ರೆಯ, ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಪಟ್ಟಣಕ್ಕೆ ಬೆಲಸಿಂದ ವನದ 280 ಎಕರೆ ವಿಸ್ತೀರ್ಣವಿರುವ ಪ್ರಕೃತಿ ವನವನ್ನು ತಾಲೂಕು ಆಡಳಿತ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಪ್ರವಾಸಿ ಕೇಂದ್ರವನ್ನಾಗಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು, ಪರಿಸರ ರಕ್ಷಣೆಗೆ ಬದ್ಧತೆಯಿಂದ ಕಾರ್ಯನಿರ್ವಹಿಸಿರುವುದರಿಂದ ಚನ್ನರಾಯಪಟ್ಟಣ ರಾಷ್ಟ್ರದಲ್ಲಿಯೇ ಉತ್ತಮ ಪರಿಸರವಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಿ.ಎನ್.ಬಾಲಕೃಷ್ಣ
ಶಾಸಕ