ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಿ ಸದೃಢರಾಗಿ

abiyana
ಬಾಳೆಹೊನ್ನೂರಿನ ರೋಟರಿ ಕ್ಲಬ್ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮವನ್ನು ಡಾ.ಪ್ರವೀಣ್ ಉದ್ಘಾಟಿಸಿದರು. ಸುರೇಂದ್ರ, ಸುಮತಿ, ವಿಜಯಲಕ್ಷ್ಮೀ, ವೆಂಕಟೇಶ್, ಸತೀಶ್ ಇದ್ದರು.
Published on

ಬಾಳೆಹೊನ್ನೂರು: ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಪ್ರವೀಣ್ ಹೇಳಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಟರಿ ಕ್ಲಬ್ ಸೋಮವಾರ ಆಯೋಜಿಸಿದ್ದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಹಲವು ಗರ್ಭಿಣಿಯರು, ಮಕ್ಕಳು ಅಪೌಷ್ಟಿಕತೆಯಿಂದ ಮೃತಪಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಪೋಷಣ್ ಅಭಿಯಾನ ಜಾರಿಗೊಳಿಸಿ ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ಕಾರ್ಯಕ್ರಮ ನಡೆಸಿ ಗರ್ಭಿಣಿ, ಬಾಣಂತಿಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಗರ್ಭಿಣಿಯರಲ್ಲಿ ಅಪೌಷ್ಟಿಕತೆ ಇದ್ದಾಗ ಅನಾರೋಗ್ಯ ಉಂಟಾಗಿ ಹುಟ್ಟುವ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಗರ್ಭಿಣಿಯರಲ್ಲಿ ಹೆಚ್ಚಾಗಿ ರಕ್ತಹೀನತೆ ಕಂಡು ಬರಲಿದ್ದು ಇದನ್ನು ಹೋಗಲಾಡಿಸಲು ಬೆಲ್ಲ, ತರಕಾರಿ ಮುಂತಾದ ಪೌಷ್ಟಿಕ ಆಹಾರಗಳನ್ನು ಸೇವಿಸಬೇಕು ಎಂದರು.
ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಕೆ.ಟಿ.ವೆಂಕಟೇಶ್ ಮಾತನಾಡಿ, ಆರೋಗ್ಯವೇ ಭಾಗ್ಯ. ನಮ್ಮ ಆಹಾರ ಪದ್ಧತಿಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಗರ್ಭಿಣಿಯರು ಆರೋಗ್ಯವಂತ ಮಗು ಪಡೆಯಲು ತರಕಾರಿ, ಪ್ರೋಟೀನ್‌ಯುಕ್ತ ಆಹಾರ ಸೇವನೆ ಮಾಡಬೇಕು. ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಗರ್ಭಿಣಿಯರು ಸದುಪಯೋಗಪಡಿಸಿಕೊಳ್ಳಬೇಕು. ಈ ಹಿಂದೆ ಗರ್ಭಿಣಿಯರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿರಲಿಲ್ಲ. ಇದೀಗ ಸರ್ಕಾರವೇ ಮನೆ ಬಾಗಿಲಿಗೆ ವಿವಿಧ ಸೇವೆಗಳನ್ನು ಒದಗಿಸುತ್ತಿದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್ ಮಾತನಾಡಿ, ಗರ್ಭಿಣಿಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಗರ್ಭಾವಸ್ಥೆಯಲ್ಲಿರುವಾಗ ಯಾವುದೇ ಆಹಾರ ತ್ಯಜಿಸಬಾರದು. ಸೊಪ್ಪು, ತರಕಾರಿ, ದ್ವಿದಳ ಧಾನ್ಯಗಳನ್ನು ಹೆಚ್ಚು ಸೇವನೆ ಮಾಡಬೇಕು ಎಂದರು.
ರೋಟರಿ ಕ್ಲಬ್‌ಯಿಂದ ಗರ್ಭಿಣಿಯರಿಗೆ ಬಾಗಿನ ನೀಡಿ ಸತ್ಕರಿಸಲಾಯಿತು. ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಸುಮತಿ, ವಿಜಯಲಕ್ಷ್ಮೀ, ರೋಟರಿ ಅಧ್ಯಕ್ಷ ಎ.ಆರ್.ಸುರೇಂದ್ರ, ಖಜಾಂಚಿ ಸತೀಶ್ ಅರಳೀಕೊಪ್ಪ, ಯಶವಂತ್, ಮಾಜಿ ಅಧ್ಯಕ್ಷ ಕೆ.ಎ.ವಿವೇಕ್, ಸುಮಿತ್ರಾ, ಅನುಪಮಾ, ಆಶಾ ಕಾರ್ಯಕರ್ತೆ ಶಿರೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net