ಗಮನ ಸೆಳೆದ ಕಾಡಿನೊಳಗೆ ಹಾಡು

26
Published on

ನಗರದಲ್ಲಿ ರಸ್ತೆ ವಿಸ್ತರಣೆಗಾಗಿ ಹೈದರಲಿ ರಸ್ತೆಯಲ್ಲಿ 40 ಮರಗಳನ್ನು ಹನನ ಮಾಡಿರುವುದು ಒಂದು ಕಡೆಯಾದರೆ ಅರುಣರಾಗ ಕ್ರಿಯೇಷನ್ಸ್‌ನವರು ನಾದಬ್ರಹ್ಮ ಸಭಾಂಗಣದಲ್ಲಿ ಕಾಡು ವಾತಾವರಣ ಸೃಷ್ಟಿಸಿ, ಹಾಡುಗಳನ್ನು ಹಾಡಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.

ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಶನಿವಾರ ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಗಾಜನೂರು ಕಣ್ಮಣಿಗಳ ಗಂಧದಗುಡಿ ರಾಗಸಂಭ್ರಮ ಏರ್ಪಡಿಸಲಾಗಿತ್ತು. ಡಾ.ರೇಖಾ ಅರುಣ್ ಅವರ ನೇತೃತ್ವದ ತಂಡ ಡಾ.ರಾಜ್‌ಕುಮಾರ್, ಡಾ.ಪುನೀತ್ ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್ ನಟಿಸಿರುವ ಚಲನಚಿತ್ರ ಗೀತೆಗಳ ಕರೊಕೆ ಗಾಯನ ಪ್ರಸ್ತುತಪಡಿಸಿದರು. ಸುಮಾರು 17 ಜನ ಗಾಯಕರು ಒಟ್ಟಾರೆ 45 ಗೀತೆಗಳನ್ನು ಹಾಡಿದರು. ಸ್ಟುಡಿಯೋ ತಂಡದಿಂದ ರೋಮಾಂಚನಕಾರಿ ನೃತ್ಯ ಪ್ರದರ್ಶನ ಕೂಡ ಇತ್ತು.

ಡಾ.ರೇಖಾ ಅರುಣ್ ಅವರ ತಂದೆ ರಾಜಶೇಖರ್ ಅವರು ಅರಣ್ಯ ಇಲಾಖೆ ಅಧಿಕಾರಿಯಾಗಿದ್ದವರು. ಮೂವರು ಮಕ್ಕಳಿಗೂ ವೈದ್ಯ ಶಿಕ್ಷಣ ಓದಿಸಿದ್ದಾರೆ. ಅವರಲ್ಲಿ ಖ್ಯಾತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ರೇಖಾ ಅರುಣ್ ಕೂಡ ಒಬ್ಬರು. ಪರಿಸರ, ಕಾಡು, ಡಾ.ರಾಜ್‌ಕುಮಾರ್ ಅವರ ಬಗ್ಗೆ ಅಪಾರ ಅಭಿಮಾನ ಇದ್ದು, ಅದನ್ನು ಸಾರ್ಥಕಗೊಳಿಸಬೇಕು. ಜತೆಗೆ ಮೂವರು ನಟಿಸಿರುವ ಗಂಧದಗುಡಿಯ ಹೆಸರಿನಲ್ಲಿ ಕಾರ್ಯಕ್ರಮ ನಡೆಸಬೇಕು ಎಂದು ಆಲೋಚಿಸಿ, ವೇದಿಕೆ ಮೇಲೆ, ಕೆಳಗೆ ಎತ್ತರದ ಗಿಡಗಳನ್ನು ಜೋಡಿಸಿದ್ದರು. ಆನೆಯ ಪ್ರತಿರೂಪವನ್ನು ವೇದಿಕೆ ಮುಂದೆ ನಿಲ್ಲಿಸಲಾಗಿದ್ದು. ಹುಲಿಯ ಪ್ರತಿರೂಪ ವೇದಿಕೆಯ ಮೇಲೆ ಮಲಗಿತ್ತು.

ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ್ ವಿ. ಬೈರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಒಂದು ಕಡೆ ಮರಗಳನ್ನು ಕಡಿಯುತ್ತಿದ್ದರೆ ಇಲ್ಲಿನ ಕಾಡಿನ ವಾತಾವರಣ ನಿರ್ಮಿಸಿ, ಗಾಯನ ಏರ್ಪಡಿಸಿರುವುದು ಮೆಚ್ಚಬೇಕಾದ ವಿಷಯ ಎಂದು ಶ್ಲಾಘಿಸಿದರು.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಗಾನಕ್ಕೆ ಸೋಲದ ಮನಸ್ಸೇ ಇಲ್ಲ. ಒತ್ತಡದಿಂದ ಬದುಕುವ ಮನುಷ್ಯರಿಗೆ ಈ ರೀತಿಯ ಕಾರ್ಯಕ್ರಮಗಳು ಬಿ.ಪಿ. ಶುಗರ್ ನಿಯಂತ್ರಣಕ್ಕೆ ನೆರವಾಗುತ್ತವೆ ಎಂದರು.

ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಆರ್‌ಎಫ್‌ಒ ಸಂತೋಷ್ ಮನೋಹರ್ ಹೂಗಾರ್, ನಿವೃತ್ತ ಡಿಎಫ್‌ಒ ಎ.ಕೆ. ಪೂವಯ್ಯ, ಪುರುಷೋತ್ತಮ್ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಪೊಲೀಸ್ ಅಕಾಡೆಮಿಯ ಡಿವೈಎಸ್‌ಪಿ ಕುಮಾರ್, ಸಮಾಜ ಸೇವಕ ವಿಕ್ರಮ್ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net