ಗದಗ ಮೃಗಾಲಯಕ್ಕೆ ಶಿವ - ಗಂಗಾ ಹೆಸರಿನ ಮತ್ತೆರಡು ಸಿಂಹ

Published on


ಗದಗ:

ರಾಜ್ಯದಲ್ಲಿಯೇ ಏಕೈಕ ಕಿರು ಮೃಗಾಲಯ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿರುವ ಗದಗ ತಾಲೂಕಿನ ಬಿಂಕದಕಟ್ಟಿ ಮೃಗಾಲಯಕ್ಕೆ ಗುರುವಾರ ಮತ್ತೆರೆಡು ಸಿಂಹಗಳ ಆಗಮನವಾಗಿದೆ.
ಕಳೆದ ವರ್ಷ ರಾಷ್ಟ್ರೀಯ ಸಿಂಹ ದಿನದ ಅಂಗವಾಗಿ ಮಾ.೧೮, ೨೦೨೧ ರಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಗದಗ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ೧೧ ವರ್ಷದ ಧರ್ಮ ಹಾಗೂ ಅರ್ಜುನ ಎಂಬ ಎರೆಡು ಗಂಡು ಸಿಂಹಗಳನ್ನು ಕರೆತರಲಾಗಿತ್ತು. ಇದೀಗ ಜೋಡಿ ಸಿಂಹಗಳ ಆಗಮನದಿಂದ ಮೃಗಾಲಯ ಕಳೆ ಕಟ್ಟಿದ್ದು, ಸಿಂಹಗಳ ಸಂಖ್ಯೆ ನಾಲ್ಕಕ್ಕೇರಿದೆ. ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
೧೯೭೨ ರಲ್ಲಿ ಪ್ರಾರಂಭವಾದ ಬಿಂಕದಕಟ್ಟಿ ಕಿರು ಮೃಗಾಲಯ ಪ್ರಸ್ತುತ ವರ್ಷ ತನ್ನ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಮಹೋತ್ಸವದ ಅಂಗವಾಗಿ ಪ್ರಸಕ್ತ ಸಾಲಿನಲ್ಲಿ ನಾನಾ ಜಾಗೃತಿ ಕಾರ್ಯಕ್ರಮವನ್ನು ಮೃಗಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ, ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಮಧ್ಯಪ್ರದೇಶದ ಇಂಧೋರ್ ಕಮಲಾ ಮೃಗಾಲಯದಿಂದ ಶಿವ ಎಂಬ ಹೆಸರಿನ ಮೂರು ವರ್ಷದ ಗಂಡು ಸಿಂಹ, ಗಂಗಾ ಎಂಬ ಹೆಸರಿಸನ ಹೆಣ್ಣು ಮರಿ ಸಿಂಹಗಳನ್ನು ಗುರುವಾರ ಮೃಗಾಲಯಲ್ಲೆ ಕರೆತರಲಾಯಿತು. ಶಾಸಕ ಎಚ್.ಕೆ. ಪಾಟೀಲ ಸಿಂಹದ ಮರಿಗಳನ್ನು ಸ್ವಾಗತಿಸಿದರು.
ಗದಗ ಮೃಗಾಲಯದಿಂದ ಕಪಿಲ ಎಂಬ ಗಂಡು ತೋಳ ಹಾಗೂ ಮೈಸೂರು ಮೃಗಾಲಯದಿಂದ ಕಸ್ತೂರಿ ಎಂಬ ಹೆಣ್ಣು ತೋಳವನ್ನು ಇಂಧೋರ್ ಕಮಲಾ ಮೃಗಾಲಯಕ್ಕೆ ಹಸ್ತಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net