ಗದಗ: ಕ್ಯಾನ್ಸರ್ ಕುರಿತು ಅರಿವು ಅಗತ್ಯ

Published on

ಗದಗ

ಕ್ಯಾನ್ಸರ್ ರೋಗವು ಗಂಭೀರ ಕಾಯಿಲೆಯಾಗಿದ್ದು ರೋಗವನ್ನು ಬೇಗನೆ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗುವ ಸಾಧ್ಯತೆ ಇರುತ್ತದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ತಿಳಿಸಿದರು.

ಜಿಲ್ಲಾಡಳಿತ ವತಿಯಿಂದ ಶನಿವಾರದಂದು ನಗರದ ಮುನ್ಸಿಪಲ್ ಕಾಲೇಜ್ ಅವರಣದಲ್ಲಿ ಜರುಗಿದ ವಿಶ್ವ ಕ್ಯಾನ್ಸರ್ ದಿನಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ವರ್ಷವೂ ಫೆಬ್ರುವರಿ 4 ರಂದು ಕ್ಯಾನ್ಸರ್ ದಿನಾಚರಣೆ ಆಚರಿಸುತ್ತಿದ್ದೇವೆ. ಕ್ಯಾನ್ಸರ್ ರೋಗಗಳಲ್ಲಿ 100 ಕ್ಕಿಂತಲೂ ಹೆಚ್ಚು ಪ್ರಕಾರಗಳಿವೆ. ಶಿಸ್ತು ಬದ್ಧ ಜೀವನ ಶೈಲಿ ನಡೆಸಿ ನಿಯಮಿತ ವ್ಯಾಯಾಮ, ನಿಯಮಿತವಾಗಿ ವೈದ್ಯರ ಸಂಪರ್ಕ ಸಲಹೆ ಹಾಗೂ ಚಿಕಿತ್ಸೆ ಪಡೆಯುವುದರಿಂದ ಕ್ಯಾನ್ಸರ್ ತಡೆಗಟ್ಟಲು ಕ್ರಮ ಕೈಗೊಳ್ಳಬಹುದು ಎಂದು ಕೆ. ಗುರುಪ್ರಸಾದ ಸಲಹೆ ನೀಡಿದರು.

ಜಿಪಂ ಸಿಇಒ ಡಾ.ಸುಶೀಲಾ ಬಿ ಮಾತನಾಡಿ ಕ್ಯಾನ್ಸರ್ ರೋಗದ ಕುರಿತು ಯಾರೂ ನಿಷ್ಕಾಳಜಿ ತೋರಬಾರದು. ರೋಗ ಲಕ್ಷಣ , ಅನುಮಾನ ಬಂದಲ್ಲಿ ನಿಯಮಿತ ತಪಾಸಣೆಗೆ ಒಳಗಾಗಬೇಕು. ರೋಗ ಖಚಿತಪಟ್ಟಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅವಶ್ಯಕವಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಗದೀಶ ನುಚ್ಚಿನ್ ಅವರು ಮಾತನಾಡಿ, ಕ್ಯಾನ್ಸರ್ ರೋಗವು ಒಂದು ಸಾಮಾಜಿಕ ಪಿಡುಗಾಗಿದೆ. ಅಲ್ಕೋಹಾಲ್ ಸೇವನೆ, ತಂಬಾಕು ಸೇವನೆ , ವೈರಸ್ ಬ್ಯಾಕ್ಟೀರಿಯಾಗಳಿಂದ, ವಿವಿಧ ಕಾರಣಗಳಿಂದ ಕ್ಯಾನ್ಸರ್ ರೋಗವು ಹರಡುತ್ತಿದೆ. ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 1 ಕೋಟಿ ಜನ ಕ್ಯಾನ್ಸರ್‍ನಿಂದ ಸಾಯುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು 10 ಲಕ್ಷ ಜನ ಕ್ಯಾನ್ಸರ್ ರೋಗದಿಂದ ಸಾಯುತ್ತಿದ್ದು ಸುಮಾರು 26 ಲಕ್ಷ ಜನ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಒಂದು ಅಂಗಕ್ಕೆ ಕ್ಯಾನ್ಸರ್ ರೋಗ ಸಂಭವಿಸಿದರೆ ಅದು ಇನ್ನೊಂದು ಅಂಗಕ್ಕೆ ಪರಿಣಾಮ ಬೀರುತ್ತದೆ. ಕ್ಯಾನ್ಸರ್ ರೋಗವನ್ನು ಆದಷ್ಟು ಬೇಗ ಗುರುತಿಸಿದಲ್ಲಿ ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಡಿ.ಎಸ್.ಪಿ. ಎಂ.ಬಿ, ಸುಂಕದ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೀತ ಖೋನಾ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಜಿಲ್ಲಾ ಸಮೀಕ್ಷಾ ಘಟಕದ ಸಿಬ್ಬಂದಿ ಇತರರು ಇದ್ದರು.

ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ನಗರದ ಮುನ್ಸಿಪಲ್ ಜ್ಯೂನಿಯರ್ ಕಾಲೇಜ್ ಆವರಣದಿಂದ ಪ್ರಾರಂಭಿಸಿ ಗಾಂಧಿ ವೃತ್ತ , ಮಹೇಂದ್ರಕರ ಸರ್ಕಲ್ , ಟಾಂಗಾಕೂಟ ಮಾರ್ಗವಾಗಿ ಹಳೇ ಬಸ್ ನಿಲ್ದಾಣ ರೋಟರಿ ಸರ್ಕಲ್ ಮಾರ್ಗವಾಗಿ ಹಳೆ ಜಿಲ್ಲಾ ಆಸ್ಪತ್ರೆ ವರೆಗೆ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net