

ಬೀರೂರು: ಗಣೇಶ ಚತುರ್ಥಿ ಆಚರಣೆಗೆ ಪಟ್ಟಣದಲ್ಲಿ ವಿವಿಧ ಕಡೆಗಳಲ್ಲಿ ತಯಾರಾದ ಮೂರ್ತಿಗಳು ಲಗ್ಗೆ ಇಡುತ್ತಿವೆ. ಅಲ್ಲದೆ ಸ್ಥಳೀಯ ಕಲಾವಿದರು ವಿವಿಧ ಬಗೆಯ ಆಕರ್ಷಕ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ.
ಬಿ.ಎಚ್.ರಸ್ತೆ, ಮಹಾತ್ಮ ಗಾಂಧಿ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಪಟ್ಟಣದ ಕುಂಬಾರ ಬೀದಿಯ ನಿವಾಸಿ ಮಲ್ಲಿಕಾರ್ಜುನ್ ಅವರು ವಿವಿಧ ರೀತಿಯಲ್ಲಿ ಮೂರ್ತಿಗಳನ್ನು ವಿನ್ಯಾಸಗೊಳಿಸಿದ್ದಾರೆ. ಸರ್ಪದ ಮೇಲೆ ಕುಳಿತಿರುವ, ಅರ್ಧನಾರೀಶ್ವರ, ವೃಷಭ, ಹುಲಿ, ಸಿಂಹ, ನವಿಲು ಹೀಗೆ ಹಲವು ರೀತಿಯಲ್ಲಿ ವೈವಿಧ್ಯಮಯವಾಗಿ ಸಿದ್ಧಪಡಿಸಿರುವ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಇದರೊಂದಿಗೆ ಗೌರಿ ಮೂರ್ತಿಗಳು ಕೂಡ ಸಿದ್ಧವಾಗಿದ್ದು ಪರಿಸರ ಸ್ನೇಹಿ ಮೂರ್ತಿಗಳನ್ನು ಸ್ಥಳೀಯ ಕಲಾವಿದರು ಸಿದ್ಧಪಡಿಸಿರುವುದು ಇನ್ನೊಂದು ವಿಶೇಷ. ಬೆಂಗಳೂರು, ದಾವಣಗೆರೆ, ಮೈಸೂರು ಕಡೆಗಳಿಂದ ಮೂರ್ತಿಗಳನ್ನು ತರಿಸುತ್ತಿದ್ದಾರೆ.
ಮಿತ್ರ ಸಮಾಜ, ಹಿಂದು ಮಹಾಸಭಾ, ಹಿಂದು ಮಹಾರಾಜೇ, ಭಜನೆಮನೆಯ ಸ್ನೇಹಕೂಟ ಗೆಳೆಯರ ಬಳಗ, ಚೌಡೇಶ್ವರಿ ಯುವಕ ಸಂಘ, ಕಟ್ಟೆಕೋಡಿ ಅಂತರಘಟ್ಟಮ್ಮ ದೇವಿ ಯುವಕ ಸಂಘ, ಓಂ ಯುವ ಸೇನೆ, ಶ್ರೀ ವೀರಭದ್ರಸ್ವಾಮಿ ಯುವಕ ಸಂಘ, ಛತ್ರಪತಿ ಶಿವಾಜಿ ಮಹಾರಾಜ ಸೇರಿದಂತೆ ವಿವಿಧ ಸಂಘಟನೆಗಳು ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸಲಿದ್ದಾರೆ.