ಹೀರಾನಾಯ್ಕ ಟಿ. ಬಳ್ಳಾರಿ: ಬೆಲೆ ಏರಿಕೆ, ಭ್ರಷ್ಟಾಚಾರ, ಅಸಮರ್ಥ ಆಡಳಿತಕ್ಕೆ ಬೇಸತ್ತಿದ್ದ ಮತದಾರರು ಕೊನೆಗೂ ಕೈ ಹಿಡಿದಿದ್ದಾರೆ.
ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನ ಸಾಮಾನ್ಯರು ತತ್ತರಿಸುತ್ತಿದ್ದಾರೆ. ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ಗ್ಯಾಸ್ಸಿಲಿಂಡರ್ ಬೆಲೆ ಹೆಚ್ಚಳದಿಂದಾಗಿ ಜನಸಾಮಾನ್ಯರು ರೋಸಿ ಹೋಗಿದ್ದು, ಈ ಸರ್ಕಾರ ಯಾವಾಗ ಹೋಗುತ್ತದೆಯೋ ಎನ್ನುವಷ್ಟರ ಮಟ್ಟಿಗೆ ಬೇಸರಗೊಂಡಿದ್ದ ರು. ಈಗ ಕಾಂಗ್ರೆಸ್ಗೆ ಅಧಿಕಾರ ನೀಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಕೊಟ್ಟ ‘ಭಾಗ್ಯ’ಗಳ ಕೊಡುಗೆ ಇಂದಿಗೂ ಬಡವರು ನೆನಪಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಅದಕ್ಕೆ ಮತದಾರ ಜೈ ಎಂದಿದ್ದಾನೆ. ಗೃಹಲಕ್ಷ್ಮಿ ಯೋಜನೆ, ಉಚಿತ ವಿದ್ಯುತ್, 10 ಕೆ.ಜಿ.ಪಡಿತರ ಅಕ್ಕಿ, ಯುವನಿಧಿ, ನಿರುದ್ಯೋಗ ಭತ್ಯೆ ಗ್ಯಾರಂಟಿ ಸ್ಕೀಂಗಳಿಗೆ ಮತಸೋತ ಮತದಾರ ಕೈ ಹಿಡಿದಿದ್ದಾರೆ. ಬಳ್ಳಾರಿ ಜಿಲ್ಲೆಯ ಐದು ವಿಧಾನ ಸಭೆ ಕ್ಷೇತ್ರಗಳ ಪೈಕಿ ಎಲ್ಲವೂ ಕೈ ವಶವಾಗಿದ್ದು, ಕಳೆದ ಬಾರಿ ಎರಡು ಕ್ಷೇತ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಈ ಬಾರಿ ಅದನ್ನೂ ಕಳೆದುಕೊಂಡಿದೆ.
ಎಸ್ಟಿ ವರ್ಗದ ಮುಂಚೂಣಿ ನಾಯಕರಾಗಿರುವ ಬಿ.ಶ್ರೀರಾಮುಲುಗೆ ಮುಖಭಂಗವಾಗಿದೆ. 2004ರಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿ 53,354 ಮತ ಪಡೆದು ಮೊದಲ ಬಾರಿಗೆ ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿದ್ದರು. 2008ರಲ್ಲಿ ಬಳ್ಳಾರಿ ಗ್ರಾಮೀಣದಿಂದ ಸ್ಪರ್ಧಿಸಿ 61,991 ಮತ ಪಡೆದು ಗೆದ್ದಿದ್ದರು. 2011ರಲ್ಲಿ ಗಾಲಿ ಜನಾರ್ದನ ರೆಡ್ಡಿ ಜೈಲಿಗೆ ಹೋದಾಗ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದರು. 2013ರಲ್ಲಿ ಬಳ್ಳಾರಿ ಗ್ರಾಮೀಣದಿಂದ ತಮ್ಮದೇ ಸ್ವಂತ ಪಕ್ಷದಿಂದ ಸ್ಪರ್ಧಿಸಿ 74,854 ಮತ ಪಡೆದು ಭರ್ಜರಿ ಗೆಲುವು ಪಡೆದಿದ್ದರು. ಬಿಜೆಪಿಯೊಂದಿಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷ ವಿಲೀನಗೊಳಿಸಿ, 2014ರ ಲೋಕಸಭೆಯಲ್ಲಿ ಗೆದ್ದಿದ್ದರು. 2018ರಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಮೊಳಕಾಲ್ಮೂರಿನಿಂದ ವಿಧಾನ ಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2004ರಲ್ಲಿ ಎಚ್.ಡಿ.ಕುಮಾರ ಸ್ವಾಮಿ ಅಧಿಕಾರಾವಧಿಯಲ್ಲಿ ಆರೋಗ್ಯ ಸಚಿವರಾಗಿ, 2008ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ, 2018ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಆರೋಗ್ಯ, ಸಮಾಜ ಕಲ್ಯಾಣ ಸಚಿವರಾಗಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕೆಲಸ ಮಾಡಿದ್ದರು. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಬಿ. ನಾಗೇಂದ್ರ ಎದುರು 29,300 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಕಾಂಗ್ರೆಸ್ನ ಹಾಲಿ ಶಾಸಕರಾದ ಕಂಪ್ಲಿಯ ಜೆ.ಎನ್.ಗಣೇಶ್, ಸಂಡೂರಿನ ಈ.ತುಕಾರಾಮ್ ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿ.ನಾಗೇಂದ್ರ ಪುನಃ ಆಯ್ಕೆಯಾಗಿದ್ದಾರೆ. 2008ರಲ್ಲಿ ಕೂಡ್ಲಿಗಿ ಎಸ್ಟಿ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ನಾಗೇಂದ್ರ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ನಂತರದಲ್ಲಿ 2013ರಲ್ಲಿ ಪಕ್ಷೇತರರಾಗಿ ನಿಂತು ಮತ್ತೊಮ್ಮೆ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು. 2018ರಲ್ಲಿ ಬಳ್ಳಾರಿ ಗ್ರಾಮೀಣ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಬಿಜೆಪಿಯ ಅಭ್ಯರ್ಥಿ ಸಣ್ಣ ಫಕೀರಪ್ಪ ವಿರುದ್ಧ ಜಯಗಳಿದ್ದರು. ಈಗ ಶ್ರೀರಾಮುಲು ವಿರುದ್ಧ ಗೆದ್ದಿದ್ದಾರೆ. ಹ್ಯಾಟ್ರಿಕ್ ಹೀರೋ ಈ.ತುಕಾರಾಮ್ ಸಂಡೂರು ಕ್ಷೇತ್ರವನ್ನು ಕಾಂಗ್ರೆಸ್ನ ಭದ್ರಕೋಟೆಯನ್ನಾಗಿಸಿಕೊಂಡಿದ್ದಾರೆ. 2008, 2013, 2018ರಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇದು ಅವರ ನಾಲ್ಕನೇ ಗೆಲುವು. ಕಂಪ್ಲಿಯಲ್ಲಿ 2018ರಲ್ಲಿ ಶಾಸಕರಾಗಿ ಆಯ್ಕೆಯಾದ ಜೆ.ಎನ್.ಗಣೇಶ್ ಎರಡನೇ ಬಾರಿಗೆ 24,091 ಅಂತರದಿಂದ ಮಾಜಿ ಶಾಸಕ ಸುರೇಶ್ಬಾಬು ಅವರನ್ನು ಸೋಲಿಸಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್ನ ನಾರಾ ಭರತ್ರೆಡ್ಡಿ ಜಯಿಸಿದ್ದಾರೆ. ಇಲ್ಲಿನ ಮತದಾರರು ವ್ಯಕ್ತಿಗಿಂತ ಪಕ್ಷಕ್ಕೆ ಹೆಚ್ಚಿನ ಮನ್ನಣೆ ನೀಡಿರುವುದು ಸಾಬೀತಾಗಿದೆ. ನಾರಾ ಭರತ್ರೆಡ್ಡಿಗೆ ಸ್ವಪಕ್ಷದ ಹಿರಿಯ ನಾಯರಿಂದಲೇ ವಿರೋಧ ಹೆಚ್ಚಿತ್ತು. ಬಹುತೇಕ ಕಾಂಗ್ರೆಸ್ನ ಹಿರಿಯ ನಾಯಕರು ಬೇರೆ ಪಕ್ಷದ ಅಭ್ಯರ್ಥಿ ಪರ ತಮ್ಮ ನಿಲುವು ವ್ಯಕ್ತಪಡಿಸಿದ್ದರು. ಆದರೂ ಮತದಾರ ಇವರ ಕೈ ಹಿಡಿದಿದ್ದಾರೆ. ಎರಡು ಬಾರಿ ಶಾಸಕರಾಗಿದ್ದ ಬಿಜೆಪಿ ಹಾಲಿ ಶಾಸಕ ಸೋಮಶೇಖರ ರೆಡ್ಡಿ ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಅವರ ಫುಟ್ಬಾಲ್ ಆಟ ಇಲ್ಲಿ ನಡೆಯಲಿಲ್ಲ. ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರು ಕೆಆರ್ಪಿಪಿಯಿಂದ ಸ್ಪರ್ಧಿಸಿ 48,118 ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡರು. ಸಂಡೂರು ಕ್ಷೇತ್ರದಲ್ಲಿ ಕೆ.ಎಸ್.ದಿವಾಕರ್ 31,375, ಸಿರಗುಪ್ಪ ಕ್ಷೇತ್ರದಲ್ಲಿ 18,652 ಮತ ಪಡೆದಿದ್ದಾರೆ. ಈ ಎರಡು ಕ್ಷೇತ್ರದಲ್ಲಿ ಕೆಆರ್ಪಿಪಿ ಮೂರನೇ ಸ್ಥಾನ ಪಡೆದಿದೆ. ಬಳ್ಳಾರಿ ನಗರದಲ್ಲಿ ಲಕ್ಷ್ಮೀ ಅರುಣಾಗೆ ಬಹಿರಂಗವಾಗಿ ಮಾಜಿ ಸಚಿವ ಎಂ.ದಿವಾಕರ ಬಾಬು ಬೆಂಬಲ ವ್ಯಕ್ತಪಡಿಸಿದರು. ಅದರಂತೆ ಬೇರೆ ಬೇರೆ ಪಕ್ಷದ ಹಿರಿಯ ನಾಯಕರು ಸಾಥ್ ನೀಡಿದರೂ ಫಲಿಸಲಿಲ್ಲ.
ಬಳ್ಳಾರಿ ನಗರ ಮತ್ತು ಸಿರಗುಪ್ಪ ಎರಡು ಕ್ಷೇತ್ರದಲ್ಲಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಮಲ ಅರಳಿತ್ತು. ಆದರೆ ಈ ಬಾರಿ ಎರಡು ಕ್ಷೇತ್ರ ಕೈ ವಶವಾಗಿವೆ. ಬಳ್ಳಾರಿ ನಗರ ಕ್ಷೇತ್ರವನ್ನು ಯುವ ನಾಯಕ ಭರತ್ರೆಡ್ಡಿ ಮತ್ತು ಸಿರಗುಪ್ಪ ಕ್ಷೇತ್ರವನ್ನು ಮಾಜಿ ಶಾಸಕ ಬಿ.ಎಂ.ನಾಗರಾಜ ತೆಕ್ಕೆಗೆ ಪಡೆದುಕೊಂಡಿದ್ದಾರೆ. ಅನುಭವಿ ರಾಜಕಾರಣಿಯಾದ ಜಿ.ಸೋಮಶೇಖರ ರೆಡ್ಡಿ ಹಾಗೂ ಎಂ.ಎಸ್.ಸೋಮಲಿಂಗಪ್ಪ 2008 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ಎರಡು ಬಾರಿ ಶಾಸಕರಾಗಿದ್ದ ಇಬ್ಬರೂ ಈ ಬಾರಿ ಸೋತಿದ್ದಾರೆ.
ಬಳ್ಳಾರಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಅದರಲ್ಲಿ ಇಬ್ಬರು ಅಭ್ಯರ್ಥಿಗಳು ಪಡೆದ ಮತಕ್ಕಿಂತ ಹೆಚ್ಚು ಮತವನ್ನು ‘ನೋಟಾ’ಕ್ಕೆ ಚಲಾಯಿಸಲಾಗಿದೆ. ಬಳ್ಳಾರಿ ನಗರ ಕ್ಷೇತ್ರದ ಮಾಜಿ ಶಾಸಕ ಅನಿಲ್ಲಾಡ್ 610 ಮತ ಪಡೆದರೆ, 983 ‘ನೋಟಾ’ ಚಲಾವಣೆಗೊಂಡಿದೆ. ಸಿರಗುಪ್ಪ ಕ್ಷೇತ್ರದ ಬಿ.ಪರಮೇಶ್ವರ ನಾಯಕ 992 ಮತ ಪಡೆದಿದ್ದು, 1645 ಮತಗಳು ‘ನೋಟಾ’ಗೆ ಬಿದ್ದಿವೆ. ಕಂಪ್ಲಿಯ ರಾಜು ನಾಯಕ 1374 ಮತ ಪಡೆದಿದ್ದಾರೆ. ಇಲ್ಲಿ 997 ಮತ ನೋಟಾ ಚಲಾಯಿಸಲಾಗಿದೆ. ಸಂಡೂರಿನಲ್ಲಿ ಎನ್.ಸೋಮಪ್ಪ 2617 ಮತ ಪಡೆದಿದ್ದು, 1065 ಮತ ನೋಟಾಗೆ ಹಾಕಲಾಗಿದೆ. ಜಿಲ್ಲೆಯಲ್ಲಿ ತೆನೆಹೊತ್ತ ಮಹಿಳೆ (ಜೆಡಿಎಸ್) ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ.
ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ರೆಡ್ಡಿ ಗೆದ್ದ ನಂತರ ಅವರ ಅಭಿಮಾನಿಗಳು ಸಂಭ್ರಮಿಸಿದರು.