ಗಣಪತಿ ವಿಸರ್ಜನೆಗೆ ಸುರಕ್ಷತಾ ಕ್ರಮ

kalayni
ಕಡೂರು ಪಟ್ಟಣದ ಕೆ.ಹೊಸಳ್ಳಿಯ ಕಲ್ಯಾಣಿಯಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಗೆ ಪುರಸಭೆಯಿಂದ ಸುತ್ತಲು ಬ್ಯಾರಿಕೇಡ್ ಮತ್ತು ಸುರಕ್ಷತಾ ಕ್ರಮ ಒದಗಿಸಿರುವುದು.
Published on

ಕಡೂರು: ಗಣೇಶಚತುರ್ಥಿ ಪ್ರಯುಕ್ತ ಪಟ್ಟಣದಲ್ಲಿ ಪ್ರತಿಷ್ಟಾಪನೆಗೊಳ್ಳುವ ಪರಿಸರಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಸಲು ಪಟ್ಟಣದ ಕೆ.ಹೊಸಳ್ಳಿಯ ಕಲ್ಯಾಣಿಯ ಸುತ್ತಮುತ್ತಲ ಪರಿಸರದಲ್ಲಿ ಶನಿವಾರ ಪುರಸಭೆಯಿಂದ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಯಿತು.
ಪಟ್ಟಣದ ಕೆ.ಹೊಸಳ್ಳಿಯ ಕಲ್ಯಾಣಿಯಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಗೆ ಪುರಸಭೆಯಿಂದ ನಿಗದಿಪಡಿಸಿರುವ ಕಲ್ಯಾಣಿಯ ಸುತ್ತಲು ಬ್ಯಾರಿಕೇಡ್, ವಿದ್ಯುತ್ ದೀಪಗಳು ಹಾಗೂ ಕಲ್ಯಾಣಿಗೆ ನೀರಿನ ಪೂರೈಕೆ ವ್ಯವಸ್ಥೆ ಕಲ್ಪಿಸಲಾಯಿತು.
ಪುರಸಭಾ ಮುಖ್ಯಾಧಿಕಾರಿ ಕೆ.ರುದ್ರೇಶ್ ಮಾತನಾಡಿ, ಈ ಬಾರಿಯ ಹಬ್ಬದ ಸಂಭ್ರಮ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಲವು ಸುರಕ್ಷತಾ ನಿಯಮ ಅನುಸರಿಸಲಾಗುತ್ತಿದೆ. ಪಟ್ಟಣದಲ್ಲಿ ಗಣೇಶೋತ್ಸವ ಸಮಿತಿಯ ಆಯೋಜಕರು ಪ್ರತಿಷ್ಟಾಪಿಸಿರುವ ಮೂರ್ತಿಗಳನ್ನು ಕೆ.ಹೊಸಳ್ಳಿಯ ಕಲ್ಯಾಣಿಯಲ್ಲಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಕಲ್ಯಾಣಿಯ ಸುತ್ತಲು ಭದ್ರತೆ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪಟ್ಟಣದಲ್ಲಿ 44 ಸಂಘಟನೆಯ ಆಯೋಜಕರಿಗೆ ಗಣೇಶಮೂರ್ತಿ ಪ್ರತಿಷ್ಟಾಪನೆಗೆ ಅನುಮತಿ ನೀಡಲಾಗಿದೆ. ಆಯೋಜಕರು ಇಲಾಖೆಗಳಿಂದ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಹೇಳಿದರು.
ಪಟ್ಟಣದ ನಾಗರೀಕರ ಸುರಕ್ಷತೆಯ ಹಿತದೃಷ್ಟಿಯಿಂದ ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಹಾಗೂ ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಆಯೋಜಕರಿಗೆ ಈಗಾಗಲೆ ಸೂಚನೆ ನೀಡಲಾಗಿದೆ. ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗುವ ಪ್ರದೇಶಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಟಾಪಿಸಲು ಅನುಮತಿ ನಿರಾಕರಿಸಲಾಗಿದೆ. ಉತ್ಸವ ಸಂದರ್ಭದಲ್ಲಿ ಯಾವುದೇ ಸಂಘರ್ಷಗಳು ಉಂಟಾಗದಂತೆ ಸಂಭ್ರಮದೊಂದಿಗೆ ಅರ್ಥಪೂರ್ಣವಾಗಿ ಹಬ್ಬವನ್ನು ಆಚರಿಸಲು ಸೂಚಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net