

ಚಿತ್ರದುರ್ಗ: ಕುಖ್ಯಾತ ಅಂತರ್ ಜಿಲ್ಲಾ ಮನೆಗಳ್ಳರಿಬ್ಬರನ್ನು ಗ್ರಾಮಾಂತರ ಪೊಲೀಸರು ಬಂಧಿಸಿ,ಅವರಿಂದ ಅಂದಾಜು 6 ಲಕ್ಷ ರೂ.ಮೌಲ್ಯದ 124 ಗ್ರಾಂ.ಚಿನ್ನಾಭರಣ ಹಾಗೂ ಬೈಕ್ ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ.ಜಿ.ರಾಧಿಕಾ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಜಗಳೂರು ತಾಲೂಕು ಪಲ್ಲಾಘಟ್ಟದ ಸನಾವುಲ್ಲಾ ಹಾಗೂ ಈತನ ಪತ್ನಿ ಹಸೀನಾಬೀಯನ್ನು ಬಂಧಿದ್ದು,ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಾದ ಪಾಲಯ್ಯ,ಸುಬಾನ್ ಸಾಬ್ ಮತ್ತು ದಾದೂ ಅವರ ಶೋಧ ನಡೆದಿದೆ. ಗಂಡನ ಕೃತಕ್ಕೆ ಹಸೀನಾಬೀ ಸಾಥ್ ನೀಡುತ್ತಿದ್ದಳು ಎಂದರು.
ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಐನಹಳ್ಳಿ ಮನೆಯೊಂದರ ಬೀಗ ಒಡೆದು ಅಂದಾಜು 3 ಲಕ್ಷ ರೂ.ಮೌಲ್ಯದ ಬಂಗಾರದ ಆಭರಣ ಹಾಗೂ 70 ಸಾವಿರ ರೂ.ನಗದನ್ನು ಆರೋಪಿಗಳು ಕಳವು ಮಾಡಿದ್ದರು. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ತುರುವನೂರು ಹಾಗೂ ಭರಮಸಾಗರ ಠಾಣೆಗಳ ವ್ಯಾಪ್ತಿ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ನಾಲ್ಕು,ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಕಡೆ ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿರುವುದಾಗಿ ಹೇಳಿದರು.
ಚಿತ್ರದುರ್ಗ ಗ್ರಾಮಾಂತರ ಸಿಪಿಐ ಬಾಲಚಂದ್ರನಾಯ್ಕ,ಪಿಎಸ್‌ಐಗಳಾದ ಮಹೇಶ್‌ಗೌಡ,ಯಶೋಧಮ್ಮ,ಸಿಬ್ಬಂದಿ ಸಂಜಯ್,ರಂಗನಾಥ, ರಘು,ಓಂಕಾರಪ್ಪ,ಅವಿನಾಶ್,ತಿಪ್ಪೇಸ್ವಾಮಿ,ರಾಜು ಮತ್ತು ಚಾಲಕ ಪೋಲಣ್ಣರೆಡ್ಡಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆಂದು ಶ್ಲಾಘಿಸಿದರು. ಎಎಸ್‌ಪಿ ಎಂ.ಬಿ.ನಂದಗಾವಿ ಇದ್ದರು.