

ಖಾಸಗಿ ಬ್ಯಾಂಕ್ ಸಾಲ ವಸೂಲಿ ಮಾಡುವ ಏಜೆಂಟರು ನೀಡಿದ ಕಿರುಕುಳ ಜಿಲ್ಲೆಯಲ್ಲಿ ಮತ್ತೊಂದು ಜೀವ ಬಲಿಗೆ ಕಾರಣವಾಗಿದೆ. ಸ್ನೇಹಿತ ಮಾಡಿದ ಮೋಸ ಹಾಗೂ ಸಾಲ ಮರು ಪಾವತಿಸುವಂತೆ ಖಾಸಗಿ ಬ್ಯಾಂಕ್ ಸಾಲ ವಸೂಲಿಗಾರರು ನೀಡಿದ ಕಿರುಕುಳದಿಂದ ನಂಜನಗೂಡು ತಾಲೂಕಿನ ಮಲ್ಲೂಪುರ ಗ್ರಾಮದ ಸಿದ್ದೇಶ್(36) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರಾಜಪ್ಪ ಎಂಬುವರ ಪುತ್ರ ಸಿದ್ದೇಶ್, ಆತ್ಮಹತ್ಯೆಗೂ ಮುನ್ನ 7 ನಿಮಿಷಗಳ ವಿಡಿಯೋ ಹೇಳಿಕೆ ದಾಖಲಿಸಿದ್ದಾರೆ. ನನ್ನ ಸಾವಿಗೆ ಸ್ನೇಹಿತ ಉತ್ತನಹಳ್ಳಿ ಮಣಿಕಂಠ ಹಾಗೂ ಐಸಿಐಸಿಐ ಬ್ಯಾಂಕ್‌ನವರು ಕಾರಣ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನನ್ನ ಕುಟುಂಬಕ್ಕೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ನಂಜನಗೂಡಿನಲ್ಲಿ ಈ ಹಿಂದೆ ಟೀ ಅಂಗಡಿ ಇಟ್ಟುಕೊಂಡಿದ್ದ ಸಿದ್ದೇಶ್ ವ್ಯಾಪಾರದಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಆಟೋ ರಿಕ್ಷಾ ಚಾಲಕರಾದರು. ಆದರೆ, ಸ್ನೇಹಿತನಿಗೆ ಸಾಲ ಕೊಡಿಸಿದ ಪರಿಣಾಮ ಇದೀಗ ಬ್ಯಾಂಕ್ ಏಜೆಂಟರು ನೀಡಿದ ಕಿರುಕುಳ ಹಾಗೂ ಸ್ನೇಹಿತ ಮಾಡಿದ ಮೋಸದಿಂದಾಗಿ ದಂಡಿಕೆರೆ ಗ್ರಾಮದ ಮಹದೇಶ್ವರ ದೇವಾಲಯದ ಸಮೀಪದ ರಸ್ತೆಯಲ್ಲಿ ಮರವೊಂದಕ್ಕೆ ಶನಿವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಭಾನುವಾರ ಬೆಳಗ್ಗೆ ಸ್ಥಳೀಯರು ಮೃತದೇಹ ಕಂಡು ವರುಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಆತ್ಮಹತ್ಯೆ ಮಾಡಿಕೊಂಡವ ಸಿದ್ದೇಶ್ ಎಂದು ಖಚಿತಪಡಿಸಿದ ಬಳಿಕ ಕುಟುಂಬದವರಿಗೆ ಮಾಹಿತಿ ನೀಡಿದರು. ಮೃತರ ಸಹೋದರ ಕುಮಾರ್ ನೀಡಿದ ದೂರಿನ ಮೇರೆಗೆ ವರುಣ ಠಾಣೆಯಲ್ಲಿ ಮಣಿಕಂಠ ಹಾಗೂ ಐಸಿಐಸಿಐ ಬ್ಯಾಂಕ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.