

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿಮಾಡುವಂತೆ ಹಾಗೂ ನೇಮಕಾತಿಯಲ್ಲಿನ ಅಕ್ರಮಗಳನ್ನು ತಡೆಗಟ್ಟಲು ಆಗ್ರಹಿಸಿ ಎಐಡಿವೈಒ ಸಂಘಟನೆ ವತಿಯಿಂದ ಗುರುವಾರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ದೊರೆಯಿತು.
ಎಐಡಿವೈಓ ಅಖಿಲ ಭಾರತ ಸಮಿತಿ ದೇಶ ವ್ಯಾಪಿ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಸಹಿ ಸಂಗ್ರಹ ಅಭಿಯಾನಕ್ಕೆ ಮೈಸೂರು ಜಿಲ್ಲಾ ಸಮಿತಿಯ ವತಿಯಿಂದ ಚಾಲನೆ ನೀಡಲಾಯಿತು.
ಈ ವೇಳೆಯಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಆರ್.ಸುನೀಲ್ ಮಾತನಾಡಿ, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಭಯನಕ ರೂಪವನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರದ 78 ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ 9.78 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಕರ್ನಾಟಕ ಸರ್ಕಾರದ ಇಲಾಖೆಗಳಲ್ಲೂ ಸಹ 2.85 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2014ರಲ್ಲಿ ಬಿಜೆಪಿ ಪಕ್ಷ ಪ್ರತಿ ವರ್ಷ ಯುವಜನರಿಗೆ 2 ಕೋಟಿ ಉದ್ಯೋಗಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. 12 ವರ್ಷ ಕಳೆದರೂ ಕೆಲವು ಲಕ್ಷ ಹುದ್ದೆಗಳನ್ನು ಸಹ ಭರ್ತಿ ಮಾಡಿಲ್ಲ. ರಾಜ್ಯದಲ್ಲೂ ಸಹ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 1 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಭರವಸೆ ನೀಡಿದ್ದರು. ಇದುವರೆಗೆ ಸಹ ನೇಮಕಾತಿ ಮಾಡಲು ಮುಂದಾಗಿಲ್ಲ ಎಂದು ಕಿಡಿಕಾರಿದರು.
ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ, ಉದ್ಯೋಗಿಗಳ ವಜಾ ಮತ್ತು ಸರ್ಕಾರಿ ಇಲಾಖೆಗಳ ಖಾಸಗೀಕರಣವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಜನರ ಹೆಚ್ಚುತ್ತಿರುವ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು, ಪ್ರತಿಯೊಬ್ಬರಿಗೂ ಅವರವರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ಒದಗಿಸಬೇಕಿರುವುದು ಸರ್ಕಾರದ ಕರ್ತವ್ಯ ಎಂದರು.
ಪ್ರತಿ ವರ್ಷ ಸಾವಿರಾರು ಯುವಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2023ರಲ್ಲಿ ಯುವಜನರ ಆತ್ಮಹತ್ಯೆಗಳ ಪ್ರಮಾಣ 14,234ಕ್ಕೆ ಹೆಚ್ಚಿದೆ. ಆದ್ದರಿಂದ, ಈ ಸಮಸ್ಯೆಗಳಿಂದ ಯುವಜನರನ್ನು ಮುಕ್ತಗೊಳಿಸಲು ಬಲಿಷ್ಠ ಹೋರಾಟವನ್ನು ಕಟ್ಟಬೇಕಿದೆ ಎಂದು ಹೇಳಿದರು. ಈ ವೇಳೆಯಲ್ಲಿ ಜಂಟಿ ಕಾರ್ಯದರ್ಶಿ ನೀತುಶ್ರೀ, ಜಿಲ್ಲಾ ಸಮಿತಿಯ ಸದಸ್ಯರಾದ ರಣಜಿತ್ ಪೂರ್ಣಿಮಾ ಮತ್ತಿತರರು ಇದ್ದರು.