ಖಾಲಿ ಕೊಡ ಹಿಡಿದು ಮಹಿಳೆಯರ ಪ್ರತಿಭಟನೆ

20HDK 1
Published on

ಎಚ್.ಡಿ.ಕೋಟೆ: ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ನೂರಾರು ಮಹಿಳೆಯರು ಮಂಗಳವಾರ ಖಾಲಿ ಕೊಡ ಹಿಡಿದು ಪಟ್ಟಣದ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣ ವ್ಯಾಪ್ತಿಯ ಹ್ಯಾಂಡ್‌ಪೋಸ್ಟ್, ಯರಹಳ್ಳಿ ವ್ಯಾಪ್ತಿಯ ವಾರ್ಡ್‌ನ ನೂರಾರು ಮಹಿಳೆಯರು ಸಾರಿಗೆ ಬಸ್ ನಿಲ್ದಾಣದ ಮುಂಭಾಗದಿಂದ ಖಾಲಿ ಕೊಡ ಹಿಡಿದು ಮೆರವಣಿಗೆಯಲ್ಲಿ ಪುರಸಭಾ ಕಚೇರಿ ಬಳಿ ತೆರಳಿ ಪ್ರತಿಭಟಿಸಿದರು.
ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೈಲಾ ಸುಧಾಮಣಿ ಮಾತನಾಡಿ, ಕಳೆದ 15 ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದ್ದು, ಜನಸಾಮಾನ್ಯರು ಪರದಾಡುತ್ತಿದ್ದಾರೆ. ವಾರ್ಡ್‌ನಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮೂರು ತಿಂಗಳಾದರೂ ಕೆಲಸ ಪ್ರಾರಂಭವಾಗಿಲ್ಲ. ಜನಸಾಮಾನ್ಯರು ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆ ಆಗಿದೆ. ಕಬಿನಿ ನೀರು ಶೇಖರಣೆಗೆ ಗ್ರಾಮದಲ್ಲೇ ನೀರಿನ ಟ್ಯಾಂಕ್ ನಿರ್ಮಾಣವಾದರೂ ಕುಡಿಯಲು ನೀರಿಲ್ಲ. ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ನೀರು ಕೊಡುತ್ತಿದ್ದಾರೆ. ವಾರ್ಡ್‌ಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಇರುವ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಈ ಸಮಸ್ಯೆಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮವಹಿಸಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಮಾತನಾಡಿ, ಜೂ.24ರೊಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಸ್ಥಗಿತಗೊಂಡಿರುವ ಕಾಮಗಾರಿ ನಡೆಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗುವುದು. ಸಮರ್ಪಕವಾಗಿ ನೀರು ಪೂರೈಕೆ ಮಾಡದ ಕೆಲಸಗಾರರನ್ನು ತೆಗೆದುಹಾಕಿ ಮತ್ತೊಬ್ಬರನ್ನು ನೇಮಕ ಮಾಡಲಾಗುವುದು. ವಾರ್ಡ್‌ಗಳಿಗೆ ಮೂಲಸೌಕರ್ಯ ಒದಗಿಸಲು ಸಂಬಂಧಪಟ್ಟ ಸದಸ್ಯರೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಅನುಷಾ, ಸುಜಾತಾ, ಜ್ಯೋತಿ, ಗೀತಾ, ನಾಗಮಣಿ, ಸಣ್ಣತಾಯಮ್ಮ, ಸುನಂದಾ, ಮಹಾದೇವಿ, ವೀಣಾ, ರಾಣಿ, ತನುಜಾ, ಭಾಗ್ಯ, ಇಂದ್ರಮ್ಮ, ಸರೋಜಮ್ಮ, ಶಾಂತಮ್ಮ, ಮುಖಂಡರಾದ ನವೀನ್ ಗೌಡ, ಧರಣೇಶ್, ಮಂಜು, ಸಿದ್ದರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net