

ಯಾದಗಿರಿ: ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಗುರುಮಠಕಲ್ ಕ್ಷೇತ್ರದಲ್ಲಿನ ಜನರ ಸಮಸ್ಯೆಗಳನ್ನು ಕೇವಲ ದೂರವಾಣಿಯ ಮೂಲಕ ಆಲಿಸಲಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಜನರ ಮಧ್ಯಕ್ಕೆ ತೆರಳಲಾಗುವುದು ಎಂದು ಶಾಸಕ ನಾಗನಗೌಡ ಕಂದಕೂರ ಪುತ್ರ ಹಾಗೂ ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ತಿಳಿಸಿದರು.
ಬುಧವಾರ ಇಲ್ಲಿನ ಗುರುಮಠಕಲ್ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಮತಕ್ಷೇತ್ರದ ಜನತೆಯ ಸಮಸ್ಯೆ ಆಲಿಸಿದ ಅವರು, ಕಳೆದ 4 ತಿಂಗಳಿಂದ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಕ್ಷೇತ್ರದ ಅನೇಕ ಹಳ್ಳಿಗಳ ಜನತೆ ತತ್ತರಿಸಿದ್ದಾರೆ. ಅವರ ಸಮಸ್ಯೆಗಳ ಪರಿಹಾರಕ್ಕೆ ಈಗಾಗಲೇ ಶಾಸಕರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಾರೆ ಎಂದರು.
ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದು ನನ್ನ ಕರ್ತವ್ಯ. ಅಲ್ಲದೆ ನಾನು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡುತ್ತೇನೆ. ತದ ನಂತರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಜತೆಗೆ ನನ್ನ ಕಾರ್ಯಕರ್ತರ ಹಿತ ಕಾಪಾಡುವುದು ನನ್ನ ಜವಾಬ್ದಾರಿ ಎಂದರು.
ಮಳೆಯಿಂದಾಗಿ ಕ್ಷೇತ್ರದ ಯರಗೋಳ ಗ್ರಾಮದಲ್ಲಿ ಸಾಕಷ್ಟು ಮನೆಗಳು ಜಖಂಗೊಂಡಿವೆ. ಈಗಾಗಲೇ ಶಾಸಕರು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ರಸ್ತೆ ಮತ್ತು ಬಿದ್ದ ಮನೆಗಳಿಗೆ ಪರಿಹಾರ ಒದಗಿಸಲು ತಹಸೀಲ್ದಾರರಿಗೆ ಮನವಿ ಮಾಡಿಕೊಳ್ಳಲಾಗಿದೆ. ಮೊಗದಂಪುರ ಗ್ರಾಮದಲ್ಲಿ ರಸ್ತೆ ಹದಗೆಟ್ಟಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು. ಚಿಂತನಳ್ಳಿ ಗ್ರಾಮದಲ್ಲಿ ವಸತಿ ಯೋಜನೆಯಡಿ ಮನೆಗಳ ಮಂಜೂರಾತಿಗೆ ಗ್ರಾಮದ ಮಹಿಳೆಯರು ಶಾಸಕರಿಗೆ ಮನವಿ ಸಲ್ಲಿಸಿದರು. ಸುಮಾರು 200 ರಿಂದ 300 ಜನ ತಮ್ಮ ಕುಂದು ಕೊರತೆಗಳ ಅಹವಾಲುಗಳನ್ನು ಸಲ್ಲಿಸಿದರು.