ಕ್ಷೇತ್ರದ ಅನುದಾನ ಬೇರೆಡೆ ವರ್ಗಾವಣೆ

9 nrp 2 pooje
ಎನ್.ಆರ್.ಪುರ ಪಟ್ಟಣದ ಸುಂಕದಕಟ್ಟೆ ಸಮೀಪವಿರುವ ಕೋಟೆ ಮಾರಿಕಾಂಬ ದೃಷ್ಟಿಕಲ್ಲು ಮಾರಿಗದ್ದುಗೆ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಕ್ಕೆ ಶಾಸಕ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ನೆರವೇರಿಸಿದರು. ಎಚ್.ಎನ್.ರವಿಶಂಕರ್, ಉಪೇಂದ್ರ, ಸುಮಂತ್, ರಘು, ಜುಬೇದಾ ಇದ್ದರು.
Published on

ಎನ್.ಆರ್.ಪುರ: ಸಮ್ಮಿಶ್ರ ಸರ್ಕಾರದಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ 18 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಶಿಕಾರಿಪುರಕ್ಕೆ ಅದನ್ನು ವರ್ಗಾಯಿಸಲಾಯಿತು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಸುಂಕದಕಟ್ಟೆ ಸಮೀಪದ ಕೋಟೆ ಮಾರಿಕಾಂಬ ದೃಷ್ಟಿಕಲ್ಲು ಮಾರಿಗದ್ದುಗೆ ವ್ಯಾಪ್ತಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ ಹಿಂದೆಯೇ 25 ಲಕ್ಷ ರೂ. ಅನುದಾನ ಮೀಸಲಿಡಲಾಗಿತ್ತು. ಅದು ಹಿಂದಕ್ಕೆ ಹೋಯಿತು. ಅಭಿವೃದ್ಧಿ ಕಾರ್ಯ ಮಾಡಬಾರದೆಂದು ಅನುದಾನ ಬೇರೆ ಕಡೆ ವರ್ಗಾಯಿಸಿದರು. ಆದರೆ ಮಾರಿಕಾಂಬ ದೇವಿಯ ಆಶೀರ್ವಾದದಿಂದ ಪುನಃ ನಾನೇ ಗೆದ್ದುಬಂದಿದ್ದು ಸಮುದಾಯ ಭವನವನ್ನು ಮುಂಬರುವ ಮಾರಿಕಾಂಬ ದೇವಿ ಜಾತ್ರೆಯೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದರು.

ಹಿಂದುತ್ವದ ಬಗ್ಗೆ ಮಾತನಾಡುವವರು, 15 ವರ್ಷ ಶಾಸಕರಾಗಿದ್ದವರು ಹಿಂದು ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿದ್ದರೂ ಅವುಗಳ ಪುನರುಜ್ಜೀವನಗೊಳಿಸಿಲ್ಲ. ವಿಧಾನ ಪರಿಷತ್ ಸದಸ್ಯರಾಗಿದ್ದ ಎಂ.ಶ್ರೀನಿವಾಸ್ ಅವರು ಶೇ.90ರಷ್ಟು ದೇವಸ್ಥಾನಗಳಿಗೆ ಕಾಯಕಲ್ಪ ಕಲ್ಪಿಸಿದರು ಎಂದು ಶ್ಲಾಘಿಸಿದರು.

ಮಿನಿ ವಿಧಾನಸೌಧ ಪಟ್ಟಣದಲ್ಲಿ ನಿರ್ಮಿಸಬೇಕೆಂದು ಜನರು ಹೋರಾಟ ಮಾಡಿದ್ದಕ್ಕೆ ಇದಕ್ಕೆ ಬೆಂಬಲಿಸಿದ ರಾವೂರು, ಲಿಂಗಾಪುರ ಗ್ರಾಮಗಳನ್ನು ಕೆಲವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕಿರು ಅರಣ್ಯ ಎಂದು ಘೋಷಿಸಿ ಜನರಿಗೆ ಹಕ್ಕುಪತ್ರ ನೀಡದಂತೆ ಮಾಡಿದ್ದಾರೆ ಎಂದು ದೂರಿದರು. ಬಗರ್‌ಹುಕುಂನಲ್ಲಿ ಅರ್ಜಿಸಿದವರಿಗೆ ಹಕ್ಕುಪತ್ರ ಕೊಡಲು ಅರಣ್ಯ ಇಲಾಖೆ ಒಪ್ಪಿಗೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಮೂಲಕ ಆದೇಶ ಹೊರಡಿಸಿ ಸಮಸ್ಯೆ ಮಾಡಿದರು. ಕರೊನಾ ಕಾಲದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಜನಸಾಮಾನ್ಯರಿಗೆ ಶಕ್ತಿ ತುಂಬುವ ಸಲುವಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಬಡವರಿಗೆ ಭೂಮಿ ನೀಡುವ 2016ರಲ್ಲಿ ರದ್ದಾಗಿದ್ದ ಟಾಸ್ಕ್‌ಫೋರ್ಸ್ ಸಮಿತಿ ಮತ್ತೆ ರಚನೆಯಾಗಿದ್ದು ಭೂರಹಿತರಿಗೆ ಭೂಮಿ ಕೊಡಲು ಅನುಕೂಲವಾಗಲಿದೆ. ಎಲ್ಲ ಸಮುದಾಯದ ಧಾರ್ಮಿಕ ಕಾರ್ಯಗಳಿಗೆ ನೆರವು ನೀಡಲಾಗುವುದು ಎಂದರು.

ಪಟ್ಟಣ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ನಿವೇಶನ ನೀಡಲು 158 ಫಲಾನುಭವಿಗಳನ್ನು ಗುರುತಿಸಲಾಗಿದೆ. ಬಡಾವಣೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ನಿವೇಶನ ಹಂಚಿಕೆ ಮಾಡಲಾಗುವುದು. ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಆಯ್ದ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಬಜೆಟ್‌ನಲ್ಲಿ ಆನೆ-ಮಾನವ ಸಂಘರ್ಷ ತಡೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 60 ಕೋಟಿ ರೂ. ನೀಡಿದ್ದಾರೆ. ಬಿಜೆಪಿಯವರು ಅಲ್ಪಸಂಖ್ಯಾತರಿಗೆ ಬಜೆಟ್ ಎಂದು ಟೀಕಿಸುತ್ತಿದ್ದಾರೆ. ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಲ್ಲ. ಜೈನರ ಅಭಿವೃದ್ಧಿಯನ್ನು ಸಹಿಸುತ್ತಿಲ್ಲ ಎಂದು ದೂರಿದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಐತಿಹಾಸಿಕ ಕೋಟೆ ಮಾರಿಕಾಂಬ ಜಾತ್ರೆ ಪ್ರಾರಂಭವಾಗಿ ದೇವಿಯ ವಿಗ್ರಹ ಕೆತ್ತನೆ ಮಾಡುವ ಸ್ಥಳಕ್ಕೆ ಪಟ್ಟಣ ಪಂಚಾಯಿತಿಯಿಂದ ದಾಖಲೆ ಕೊಡಿಸಲಾಗಿದೆ. ಅಂಬೇಡ್ಕರ್ ಭವನದ ಮೇಲ್ಛಾವಣಿಯ ಶೀಟುಗಳನ್ನು ಬದಲಾಯಿಸಲಾಗಿದೆ. ಊಟದ ಹಾಲ್ ನಿರ್ಮಿಸಲಾಗಿದೆ ಎಂದರು.

ಜಾತ್ರಾ ಸಮಿತಿಯ ಎಚ್.ಎನ್.ರವಿಶಂಕರ್, ಉಪೇಂದ್ರ, ಸುಮಂತ್, ರಘು, ಪಪಂ ಸದಸ್ಯೆ ಜುಬೇದಾ, ಗ್ರಾಪಂ ಸದಸ್ಯ ರಮೇಶ್ ದೊಡ್ಡಮನಿ, ಸಾಜು, ಮುಖಂಡರಾದ ರಾಮು, ಅಶ್ವಲ್, ಮಂಜುನಾಥ್, ಈ.ಸಿ.ಜೋಯಿ, ಬೆನ್ನಿ, ವಿನಾಯಕ ಸೇವಾ ಸಮಿತಿ ಸದಸ್ಯರು, ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net