

ಕ್ಷಯ (ಟಿಬಿ) ರೋಗದಿಂದಲೂ ಇಂದು ಹೆಚ್ಚು ಸಾವು ಸಂಭವಿಸುತ್ತಿದ್ದು, ಕ್ಷಯದ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯಾಧಿಕಾರಿ ಡಾ.ಎಂ.ಎಸ್.ಬಸವರಾಜ್ ಸಲಹೆ ನೀಡಿದರು.
ಯುವರಾಜ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಟಿಬಿ ಮುಕ್ತ ಭಾರತ-ಯುವ ಜನರ ಜವಾಬ್ದಾರಿ ವಿಷಯ ಕುರಿತ ಜಾಗೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷಯದಿಂದ ಬಳಲುತ್ತಿರುವ ವ್ಯಕ್ತಿ ಗುಣವಾಗದೇ ಇದ್ದರೆ ತನ್ನ ಕುಟುಂಬದ ಸದಸ್ಯರು ಮಾತ್ರವಲ್ಲದೆ ಹೊರಗೆ 20 ಜನರಿಗೆ ಕಾಯಿಲೆ ಹಬ್ಬಿಸಬಲ್ಲ. ರಸ್ತೆ ಬದಿಯಲ್ಲಿ ಉಗುಳುವವರನ್ನು ಎಷ್ಟು ಜನರನ್ನು ಪ್ರಶ್ನಿಸಿದ್ದೀರಿ ಎಂದ ಅವರು, ಪ್ರಶ್ನಿಸಿದರೆ ನಿಮ್ಮಪ್ಪನ ರಸ್ತೆಯಾ ಎಂದು ಮರು ಪ್ರಶ್ನಿಸುತ್ತಾರೆ. ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಉಗಿಯುತ್ತಾ ಹೋಗುತ್ತಾನೆ. ಅದು ಒಣಗಿದ ನಂತರ ಗಾಳಿಗೆ ಬಂದು ಆರೋಗ್ಯವಂತರಿಗೂ ಕ್ಷಯ ತಗುಲುತ್ತದೆ. ಸಾರ್ವಜನಿಕ ಸ್ಥಳದಲ್ಲಿಯೇ 20 ಜನರಿಗೆ ಕಾಯಿಲೆ ಹರಡಿಸಿದರೆ, ಮನೆಯಲ್ಲಿರುವವರಿಗೆ ಸೋಂಕು ಹರಡುವುದು ಗ್ಯಾರಂಟಿ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸಮೀಕ್ಷೆಯೊಂದರ ಪ್ರಕಾರ 15 ವರ್ಷ ಮೇಲ್ಪಟ್ಟ ಶೇ.21ರಷ್ಟು ಜನರಿಗೆೆ ಕ್ಷಯ ಕಂಡು ಬರುತ್ತಿದೆ. ಇದನ್ನು ಗಮನಿಸಿದರೆ 45-50 ವರ್ಷ ಮೇಲ್ಪಟ್ಟವರಿಗೆ ಕ್ಷಯ ಸೋಂಕು ಇರುವುದು ಖಚಿತ ಎನಿಸುತ್ತದೆ. ಇದರಿಂದ ಕ್ಷಯ ರೋಗ ಪಸರಿಸದಂತೆ ಕಟ್ಟೆಚ್ಚರ ವಹಿಸಬೇಕು. ಪ್ರಮುಖವಾಗಿ ರೋಗ ಹರಡದಂತೆ ಜಾಗೃತಿ ಮೂಡಿಸುವುದು ಅನಿವಾರ್ಯ ಎಂದರು.
ಪ್ರತಿಯೊಂದು ಕಾಯಿಲೆಗೂ ಪ್ರತ್ಯೇಕ ಜಾಗೃತಿ ಕಾರ್ಯಕ್ರಮ ನಡೆಸುವುದು ಸರಿಯಲ್ಲ. ವೈರಸ್ ಹಾಗೂ ಬ್ಯಾಕ್ಟೀರಿಯಾದಿಂದ ಹರಡುವ ಎಲ್ಲ ರೋಗಗಳ ಹರಡುವಿಕೆ ತಡೆಗೆ ಒಟ್ಟಿಗೆ ಜಾಗೃತಿ ಕಾರ್ಯಕ್ರಮ ಮೂಡಿಸಿ, ನೀಡಿದ ಸಂದೇಶವನ್ನು ವರ್ಷವಿಡೀ ಪಾಲನೆ ಮಾಡುವಂತೆ ಜನರಿಗೆ ಮನವರಿಕೆ ಮಾಡಿಕೊಟ್ಟರೆ ಕಾರ್ಯಕ್ರಮದ ಉದ್ದೇಶ ಸಾಕಾರಗೊಳ್ಳಲಿದೆ ಎಂದರು.
ಪ್ರಾಂಶುಪಾಲ ಪ್ರೊ.ಎ.ಮಹದೇವಮೂರ್ತಿ, ಆಡಳಿತಾಧಿಕಾರಿ ಪ್ರೊ.ಕೆ.ಅಜಯ್ ಕುಮಾರ್, ಪರೀಕ್ಷಾಂಗ ನಿಯಂತ್ರಕ ನಾಗೇಶ್ ಬಾಬು, ಐಕ್ಯೂ ಸೆಂಟರ್ ಸಂಯೋಜಕ ಪ್ರೊ.ಬಿ.ಎಂ.ವೆಂಕಟೇಶ್, ಪ್ರೊ.ಎಚ್.ಎಸ್.ಜಯಂತ್, ಸೈನ್ಸ್ ಫೋರಮ್ ಸಂಚಾಲಕಿ ಡಾ.ಎನ್.ಎಸ್.ದೇವಕಿ ಇದ್ದರು.