

ಬೆಂಗಳೂರು: ರಸ್ತೆ ಬದಿ ಆಟೋ ನಿಲ್ಲಿಸಿಕೊಂಡು ಒಳಗೆ ಕುಳಿತಿದ್ದಾಗ ಹಿಂದಿನಿಂದ ಕ್ರೆನ್ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟಿದ್ದಾನೆ.
ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮೌರ್ಯ ಜಂಕ್ಷನ್ ಸಮೀಪದ ಗಾಂಧಿ ಪಾರ್ಕ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ಮೂಲತಃ ತಮಿಳುನಾಡಿನ ಹಾಗೂ ಮಾಗಡಿ ರಸ್ತೆಯ ಹೇರೋಹಳ್ಳಿಯಲ್ಲಿ ವಾಸವಾಗಿದ್ದ ವಿನೋದ್‌ಕುಮಾರ್(೩೫) ಮೃತಪಟ್ಟ ಆಟೋ ಚಾಲಕ. ರಾತ್ರಿ ಬಾಡಿಗೆಗೆಂದು ವಿನೋದ್ ಕುಮಾರ್ ಆಟೋ ತೆಗೆದುಕೊಂಡು ಹೋಗಿದ್ದು, ಶೇಷಾದ್ರಿ ರಸ್ತೆಯ ಗಾಂಧಿ ಪಾರ್ಕ್ ಬಳಿ ಬೆಳಗ್ಗೆ ೬.೪೦ರ ಸುಮಾರಿನಲ್ಲಿ ಸ್ನೆಹಿತರೊಂದಿಗೆ ಟೀ ಕುಡಿದಿದ್ದು, ಅವರು ಹೋದ ಬಳಿಕ ಆಟೋದಲ್ಲೆ ಕುಳಿತಿದ್ದರು. ಆ ಸಂದರ್ಭದಲ್ಲಿ ರೇಸ್‌ಕೋರ್ಸ್ ಮಾರ್ಗವಾಗಿ ವೇಗವಾಗಿ ಬಂದ ಕ್ರೆನ್ ಹಿಂದಿನಿಂದ ಆಟೋಗೆ ಡಿಕ್ಕಿ ಹೊಡೆದುಕೊಂಡು ಸುಮಾರು ೩೦ ಅಡಿ ದೂರಕ್ಕೆ ಎಳೆದೊಯ್ದಗ ಆಟೋದಿಂದ ವಿನೋದ್ ಕುಮಾರ್ ಕೆಳಗೆ ಬಿದ್ದಿದ್ದಾರೆ. ಆ ವೇಳೆ ಕ್ರೆನ್ ಚಕ್ರ ಅವರ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಉಪ್ಪಾರಪೇಟೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಕ್ರೆನ್ ಚಾಲಕನನ್ನು ವಶಕ್ಕೆ ಪಡೆದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಿಕ್ಟೊರಿಯಾ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.