ಕ್ರಿಮಿನಲ್​ ಚಟುವಟಿಕೆ ಮರುಕಳಿಸಿದ್ರೆ ಗಡಿಪಾರು: ರೌಡಿಗಳಿಗೆ ಎಸ್ಪಿ ದೇವರಾಜ ಖಡಕ್​ ಎಚ್ಚರಿಕೆ, ಸನ್ನಡತೆ ತೋರಿದರೆ ಬಿಡುಗಡೆ

30-kolar- 6
ಕೋಲಾರದಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ ರೌಡಿಶೀಟರ್​ಗಳ ಪರೇಡ್​ನಲ್ಲಿ ರೌಡಿಗಳಿಗೆ ಎಚ್ಚರಿಕೆ ನೀಡಿದರು.
Published on

ಕೋಲಾರ: ಜಿಲ್ಲೆಯಲ್ಲಿ ಪ್ರತಿಯೊಬ್ಬ ರೌಡಿಶೀಟರ್​ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಯಾವಾಗ ಯಾರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಮತ್ತೆ ಬಾಲ ಬಿಚ್ಚಿದರೆ ಕಟ್​ ಮಾಡುವುದು ಗೊತ್ತಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ ಖಡಕ್​ ಎಚ್ಚರಿಕೆ ನೀಡಿದರು.


ನಗರದ ಪೊಲೀಸ್​ ಕವಾಯತು ಮೈದಾನದಲ್ಲಿ 4 ವರ್ಷದ ನಂತರ ಗುರುವಾರ ಆಯೋಜಿಸಿದ್ದ 4 ತಾಲೂಕುಗಳ ರೌಡಿಶೀಟರ್​ಗಳ ಪರೇಡ್​ನಲ್ಲಿ ಮಾತನಾಡಿ, ಕ್ರಿಮಿನಲ್​ ಚಟವಟಿಕೆಗಳಲ್ಲಿ ಭಾಗವಹಿಸದೆ ಸನ್ನಡತೆ ಹೊಂದಿರುವವರ ರೌಡಿಶೀಟರ್​ ತೆಗೆದು ಹಾಕಲಾಗುವುದು. ರೌಡಿ ಚಟುವಟಿಕೆಗಳನ್ನು ಮುಂದುವರಿಸಿದರೆ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ. ನಿರಂತರವಾಗಿ ಕ್ರಿಮಿನಲ್​ ಚಟುವಟಿಕೆಗಳಲ್ಲಿ ತೊಡಗಿದರೆ ಗಡಿಪಾರು ಮಾಡುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.


ಕ್ರಿಮಿನಲ್​ ಚಟುವಟಿಕೆಗಳಲ್ಲಿ ಹಲವು ವರ್ಷದಿಂದ ಭಾಗಿಯಾಗದ ರೌಡಿಗಳು ಅರ್ಜಿ ನೀಡಿದರೆ, ರೌಡಿಶೀಟರ್​ ತೆಗೆಯಲಾಗುವುದು. ಆದರೆ ಕೆಲವರು ಹಗಲು ಹೊತ್ತಿನಲ್ಲಿ ಸುಮ್ಮನಿದ್ದು, ರಾತ್ರಿ ಕ್ರಿಮಿನಲ್​ ಚಟುವಟಿಕೆ ಮುಂದುವರಿಸುತ್ತಿದ್ದಾರೆ. ಅಂತಹವರು ಛಾಳಿ ಬಿಡಬೇಕು. ಇಲ್ಲವಾದರೆ ತಕ್ಕ ಪಾಠ ಕಳಿಸಬೇಕಾಗುತ್ತದೆ ಎಂದರು.


ಕೋಲಾರದಲ್ಲಿ ಕೆಎಸ್​ಆರ್​ಟಿಸಿ ಬಸ್​ಗೆ ಬೆಂಕಿ ಹಚ್ಚಿದ್ದ ಪ್ರಕರಣದ ಆರೋಪಿಗಳನ್ನು ವಿಚಾರಿಸಿದ ಎಸ್ಪಿ, ಯಾವುದೇ ರೀತಿಯ ತೊಂದರೆಯಾದರೆ ಪೊಲೀಸರ ಬಳಿಗೆ ಬರಬೇಕು. ಅದು ಬಿಟ್ಟು ನಿಮ್ಮ ಪಾಡಿಗೆ ನೀವು ಕಾನೂನು ಕೈಗೆತ್ತಿಕೊಂಡರೆ ಏನಾಗುತ್ತದೆ ಎಂಬುದು ಗೊತ್ತಿರಬೇಕು. ಇನ್ನಾದರೂ ಕಾನೂನಿಗೆ ಗೌರವ ಕೊಡಿ, ಕಾನೂನು ಕೈಗೆತ್ತಿಕೊಂಡರೆ ಎಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ನಿಮ್ಮ ಸುತ್ತಲಿನವರಿಗೆ ಮನವರಿಕೆ ಮಾಡಿ ಕೊಡಿ ಎಂದು ಹೇಳಿದರು.


ರೈಸ್​ ಪುಲ್ಲಿಂಗ್​ ದಂಧೆಯಲ್ಲಿ ಭಾಗಿಯಾಗಿರುವ ರಾಮಚಂದ್ರ, ಮುನಿರಾಜು ಹಾಗೂ ಮುಳಬಾಗಿಲಿನ ಜಗನ್​ಮೋಹನ್​ ರೆಡ್ಡಿ ಕೊಲೆ ಆರೋಪಿ ಬಾಲಾಜಿ ಸಿಂಗ್​ ಸಹಚರ ದೀಪು ಎಂಬುವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.


ಸನ್ನಡತೆ ಹೊಂದಿರುವ ರೌಡಿಗಳನ್ನು ರೌಡಿಶೀಟರ್​ ಪಟ್ಟಿಯಿಂದ ತೆಗೆಯಲು ಕ್ರಮಕೈಗೊಂಡಿದ್ದು, ಅರ್ಜಿ ನೀಡಬಹುದು. ನೀವು ಸದಾ ರೌಡಿಗಳಾಗಿ ಉಳಿಯಬೇಕು ಎಂದು ನಾವು ಬಯಸುವುದಿಲ್ಲ. ರೌಡಿಗಳು ಬದಲಾದರೆ ಪೊಲೀಸರಿಗೆ ಖುಷಿಯಾಗುತ್ತದೆ. ಹೀಗಾಗಿ ಯಾವುದೇ ಕ್ರಿಮಿನಲ್​ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಸನ್ನಡತೆ ತೋರಿ ಎಂದು ಸೂಚಿಸಿದರು.

ರೌಡಿ ಚಟುವಟಿಕೆ ಸಹಿಸುವ ಪ್ರಶ್ನೆಯೇ ಇಲ್ಲ. ಠಾಣಾವಾರು ಎಲ್ಲ ರೌಡಿಗಳೊಂದಿಗೆ ಖುದ್ದಾಗಿ ಮಾತನಾಡಿದ್ದು, ಕೆಲವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 60 ವರ್ಷ ಮೀರಿದವರ ರೌಡಿ ಶೀಟ್​ ತೆಗೆಯಲು ಅವಕಾಶ ನೀಡಲಾಗಿದೆ. ಕೊಲೆ ಪ್ರಕರಣಗಳಲ್ಲಿ ಭಾಗಿ, ಬೆಟ್ಟಿಂಗ್​, ಒಂಟಿ ಜೋಡಿ ಕೊಲೆ, ಇಸ್ಪೀಟ್​ ಆಟಕ್ಕೆ ಹಣಕಾಸು ಕೊಟ್ಟು ಬಡವರಿಂದ ಜಮೀನುಗಳನ್ನು ಬರೆಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಅಂತಹವರ ಮೊಬೈಲ್​ ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ.

ಡಿ.ದೇವರಾಜ್​, ಎಸ್ಪಿ

59 ಮಂದಿ ರೌಡಿಶೀಟರ್​: ಹತ್ತು ವರ್ಷದಲ್ಲಿ ನಡೆದಿರುವ ಕೊಲೆ, ಕೊಲೆ ಯತ್ನ ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಬಹಳಷ್ಟು ಪ್ರಕರಣಗಳಲ್ಲಿ ರೌಡಿಶೀಟರ್​ ತೆರೆದಿಲ್ಲ. ಐಪಿಸಿ 302 ಹಾಗೂ 307 ಸೆಕ್ಷನ್​ ಇರುವವರ ಮೇಲೆ ರೌಡಿಶೀಟ್​ ಹಾಕಲಾಗುತ್ತಿದೆ. 25 ದಿನಗಳಲ್ಲಿ 59 ಮಂದಿಯನ್ನು ರೌಡಿಶೀಟರ್​ ಪಟ್ಟಿಗೆ ಸೇರಿಸಲಾಗಿದೆ. ನಾಲ್ಕಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ ಸಕ್ರಿಯವಾಗಿರುವ 4 ಮಂದಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಕ್ರಮಕೈಗೊಳ್ಳಲಾಗಿದೆ. ಕೆಲವರನ್ನು ಗಡಿಪಾರು ಮಾಡಲು ತೀಮಾರ್ನ ಕೈಗೊಳ್ಳಲಾಗಿದೆ ಎಂದು ದೇವರಾಜ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net