ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡು ಸಾಲ ತೀರಿಸಲು ದೊಡ್ಡಮ್ಮನ ಮನೆಗೆ ಕನ್ನ ಹಾಕಿದ್ದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಪಾಪರೆಡ್ಡಿಪಾಳ್ಯ ನಿವಾಸಿ ಅಭಿಷೇಕ್ (28) ಬಂಧಿತ. ಆರೋಪಿಯಿಂದ 4.55 ಲಕ್ಷ ರೂ. ಮೌಲ್ಯದ 144 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಸಂಜೀವ್ ಎಂ.ಪಾಟೀಲ್ ತಿಳಿಸಿದ್ದಾರೆ.
ಆರೋಪಿ ಅಭಿಷೇಕ್ ಬಿ.ಕಾಂ ಪದವಿ ವ್ಯಾಸಂಗ ಮುಗಿಸಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದಿದ್ದ. ಆನ್‌ಲೈನ್ ಪೋರ್ಟಲ್‌ಗಳಲ್ಲಿ ಬೆಟ್ಟಿಂಗ್‌ಗೆ ಹಣ ಕಟ್ಟಿ ಲಕ್ಷಾಂತರ ರೂ. ಕಳೆದುಕೊಂಡಿದ್ದ. ಇದರಿಂದ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಆಗಿಲ್ಲ. ಹಣ ವಾಪಸ್ ಕೊಡುವಂತೆ ಸಾಲಗಾರರು ಒತ್ತಾಯಿಸುತ್ತಿದ್ದರು.ಒಂದು ವರ್ಷದ ಹಿಂದೆ ಮಾರುತಿನಗರದ ತನ್ನ ದೊಡ್ಡಮ್ಮನ ಮನೆಯಲ್ಲಿದ್ದಾಗ, ಆಕೆಯ ಬಳಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಇರುವುದು ಗೊತ್ತಾಗಿತ್ತು.
ಅಭಿಷೇಕ್ ಅ.13ರಂದು ದೊಡ್ಡಮ್ಮನ ಮನೆಗೆ ಹೋಗಿದ್ದ. ಈ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಹಿಂಬಾಗಿಲಿಂದ ಮನೆಗೆ ನುಗ್ಗಿದ್ದ. ಮನೆಯೊಳಗಿನಿಂದ ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಿ, ಚಿನ್ನದಸರ, ಕಿವಿಯೋಲೆ, ಉಂಗುರ ಸೇರಿದಂತೆ 144 ಗ್ರಾಂ ಒಡವೆಗಳನ್ನು ದೋಚಿ, ಪರಾರಿಯಾಗಿದ್ದ. ಮಹಿಳೆ ಮನೆಗೆ ಬಂದಾಗ, ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಿರುವುದು ಕಂಡು ಬಂದಿತ್ತು. ಹಿಂಬಾಗಿಲಿಗೆ ಹೋಗಿ ನೋಡಿದಾಗ, ಯಾರೋ ಅಪರಿಚಿತರು ಮನೆಗೆ ನುಗ್ಗಿ ಕಳ್ಳತನ ಮಾಡಿರುವುದು ಗೊತ್ತಾಗಿತ್ತು. ಈ ಕುರಿತು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಬೈಕ್ ಸುಳಿವು ಸಿಕ್ಕಿತ್ತು. ಇದನ್ನು ಆಧರಿಸಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಿದ್ದು, ಅದನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.