

ಹುಣಸೂರು: ಕೋವಿಡ್ ನಾಲ್ಕನೇ ಅಲೆಯ ಕುರಿತಂತೆ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆಯಿಲ್ಲ. ಆದರೆ, ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೋವಿಡ್ ನಿಯಂತ್ರಣ ಕುರಿತ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ನಾಲ್ಕನೇ ಅಲೆಯ ಬಗ್ಗೆ ಭಯಪಡುವ ಅವಶ್ಯಕತೆಯಿಲ್ಲ. ತಾಲೂಕಿನಾದ್ಯಂತ ಎರಡು ಹಂತದ ಲಸಿಕೆ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬೂಸ್ಟರ್ ಡೋಸ್ ವಿತರಣೆಯಲ್ಲಿ ವಿಳಂಬವಾಗಿದ್ದು, ಆರೋಗ್ಯ ಇಲಾಖೆ ಸೂಕ್ತ ಕ್ರಮ ಜರುಗಿಸುವುದು ಅಗತ್ಯ. ಸಾರ್ವಜನಿಕರು ಮಾಸ್ಕ್ ಧರಿಸುವ, ಸ್ಯಾನಿಟೈಸರ್ ಬಳಸುವುದು ಅಗತ್ಯ ಎಂದರು.
ರೂಪಾಂತರಿ ವೈರಸ್ ಬಿಎಫ್.2 ಅಂತಹ ಪರಿಣಾಮ ಉಂಟುಮಾಡುವುದಿಲ್ಲವೆಂದು ತಜ್ಞರು ತಿಳಿಸಿದ್ದಾರೆ. ಹಾಗೆಂದು ಸಾರ್ವಜನಿಕರು ಎಚ್ಚರ ತಪ್ಪಬಾರದು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ಐಸಿಯು ಜತೆ ಆಕ್ಸಿಜನೇಟೆಡ್ ಹಾಸಿಗೆಗಳ ವ್ಯವಸ್ಥೆ ಕೈಗೊಳ್ಳಲು ಸೂಚಿಸಲಾಗಿದೆ. ಅಗತ್ಯ ನೆರವನ್ನು ಜಿಲ್ಲಾಡಳಿತದಿಂದ ಪಡೆಯಲಾಗುವುದು. ಆಕ್ಸಿಜನ್ ಕೊರತೆಯಾಗದಂತೆ ಕ್ರಮವಹಿಸಲು ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್ ರಾಜ್ ಅರಸ್ ಮಾತನಾಡಿ, ತಾಲೂಕಿನಲ್ಲಿ 6,900 ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ದಾಸ್ತಾನು ಇದೆ. 1.40 ಲಕ್ಷ ಕೋವಿಶೀಲ್ಡ್ ಬೂಸ್ಟರ್ ಡೋಸ್‌ನ ಅವಶ್ಯಕತೆಯಿದ್ದು, ಈಗಾಗಲೇ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲಾಗಿದೆ. ಶೇ.98ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ. ಶೇ.85ರಷ್ಟು ಮುಂಚೂಣಿ ಕಾರ್ಯಕರ್ತರು, ಹಿರಿಯ ನಾಗರಿಕರಿಗೆ ಶೇ.65ರಷ್ಟು ಲಸಿಕೆ ನೀಡಲಾಗಿದೆ. 15-55ವರ್ಷದೊಳಗಿನವರ ಪೈಕಿ ಶೇ.25ರಷ್ಟು ಮಾತ್ರ ಬೂಸ್ಟರ್ ಡೋಸ್ ನೀಡಲಾಗಿದ್ದು, ಈ ಕುರಿತು ಹೆಚ್ಚಿನ ಗಮನಹರಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ರುಚಿ ಬಿಂದಾಲ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ, ನಾನಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.