ಕೋಲಾರದಲ್ಲಿ ಸಮ್ಮೇಳನ ನಡೆಸಲು ಬದ್ಧ: ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಘೋಷಣೆ, ಸಿದ್ಧತೆ ಕೈಗೊಳ್ಳಲು ಸೂಚನೆ

22-klr-4
ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಚನ್ನಬಸವರಾಧ್ಯ ಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಕೃತಿಗಳನ್ನು ಬಿಡುಗಡೆ ಮಾಡಿದರು. ಜಿಲ್ಲಾಧ್ಯಕ್ಷ ಎನ್.ಜಿ.ಗೋಪಾಲಗೌಡ, ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್ ಇತರರಿದ್ದರು.
Published on

ಕೋಲಾರ: ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಬದ್ಧನಾಗಿದ್ದು, ಈಗಿನಿಂದಲೇ ಸಿದ್ಧತೆ ಕೈಗೊಳ್ಳುವಂತೆ ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಜಿಲ್ಲಾ ಘಟಕಕ್ಕೆ ಸೂಚನೆ ನೀಡಿದರು.

ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಚನ್ನಬಸವರಾಧ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 1924ರಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿತ್ತು. 97 ವರ್ಷಗಳಿಂದ ಯಾವ ಕಾರಣಕ್ಕೆ ಹಿಂದಿನ ಅಧ್ಯಕ್ಷರು ಅವಕಾಶ ನೀಡಲಿಲ್ಲ ಎಂದು ಪ್ರಶ್ನಿಸಿದರು.

5 ವರ್ಷದ ಅವಧಿಯೊಳಗೆ ಕೋಲಾರದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಲು ಬದ್ಧ. ಸರಳ, ಸುಂದರ, ನಿಜವಾದ ಅರ್ಥದಲ್ಲಿ ಕನ್ನಡದ ಅಸ್ಮಿತೆ, ಭಾವನೆ, ಸಂಸ್ಕೃತಿ ತೋರುವ ಐತಿಹಾಸಿಕ ಸಾಹಿತ್ಯ ಸಮ್ಮೇಳನವಾಗಿಸಬೇಕು. ನನ್ನ ನಿರ್ಧಾರವನ್ನು ನೂತನ ಸಮಿತಿ ಒಪ್ಪುತ್ತದೆ ಎಂಬ ನಂಬಿಕೆಯಿದೆ ಎಂದರು.

ಆಜೀವ ಸದಸ್ಯತ್ವ ಶುಲ್ಕ 250 ರೂ.ಗೆ ಇಳಿಸಲು ಕಾರ್ಯಕಾರಿ ಸಮಿತಿ ಒಪ್ಪಿದೆ. ಸೇನೆ, ಗಡಿಭದ್ರತಾ ಪಡೆ, ಅರೆಸೇನಾ ಪಡೆ, ನಿವೃತ್ತ ಯೋಧರು, ಅಂಗವಿಕಲರಿಗೆ ಮನೆ ಬಾಗಿಲಿಗೆ ಹೋಗಿ ಶುಲ್ಕ ರಹಿತವಾಗಿ ಸದಸ್ಯತ್ವ ನೀಡಲಾಗುವುದು. ಈಗಿರುವ 3.40 ಲಕ್ಷ ಸದಸ್ಯತ್ವವನ್ನು 1 ಕೋಟಿಗೆ ಹೆಚ್ಚಿಸಲಾಗುವುದು ಎಂದರು.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪಾರದರ್ಶಕವಾಗಿ ಆ್ಯಪ್ ಮೂಲಕ ಮತದಾನ ನಡೆಸಲಾಗುವುದು. ಆ್ಯಪ್ ಮೂಲಕ ನಡೆಯುವ ಮೊಟ್ಟ ಮೊದಲ ಚುನಾವಣೆ ಕಸಾಪದ್ದಾಗಿರುತ್ತದೆ. ಒಮ್ಮೆಲೇ ರಾಜ್ಯ, ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಮಂದಿ ಆಯ್ಕೆಗೆ ಮತಚಲಾಯಿಸುವ ಅವಕಾಶ ನೀಡಲಾಗುವುದು ಎಂದರು.

ಕಸಾಪ ಬೈಲಾ ತಿದ್ದುಪಡಿಗೆ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಅಧ್ಯಕ್ಷತೆಯಲ್ಲಿ ರಚಿಸಿರುವ 11 ಸದಸ್ಯರನ್ನೊಳಗೊಂಡ ಸಮಿತಿ ಮುಂದಿನ 10 ದಿನಗಳಲ್ಲಿ ವರದಿ ನೀಡಲಿದ್ದು, ವಿಶೇಷ ಸರ್ವ ಸದಸ್ಯರ ಸಭೆ ಕರೆದು ಅನುಮೋದನೆ ಪಡೆಯಲಾಗುವುದು ಎಂದರು.

ಜಿಲ್ಲಾಧ್ಯಕ್ಷ ಎನ್.ಜಿ.ಗೋಪಾಲಗೌಡ ಮಾತನಾಡಿ, ಐದು ವರ್ಷದ ಅವಧಿಯಲ್ಲಿ ವಿನೂತನ ಕಾರ್ಯಕ್ರಮಗಳ ಜತೆಗೆ ಜಿಲ್ಲಾ ಹಂತದಲ್ಲಿ ತ್ರೈಮಾಸಿಕ ಸಾಹಿತ್ಯ ಸಂಪದ ಹೊರತಂದು ಕವಿ, ಬರಹಗಾರರನ್ನು ಗುರುತಿಸುವ ಕೆಲಸ ಮಾಡಲಾಗುವುದು. ಪ್ರತಿ ತಿಂಗಳು ಪ್ರೌಢಶಾಲೆ, ಕಾಲೇಜುಗಳಲ್ಲಿ ಕನ್ನಡಪರ ಕಾರ್ಯಕ್ರಮ ನಡೆಸಲಾಗುವುದು. ತಾಲೂಕು, ಜಿಲ್ಲಾಮಟ್ಟದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.

ಲೇಖಕರಾದ ನಾರಾಯಣಸ್ವಾಮಿ ರಚಿತ ಹಣತೆಗಳ ಜೋಗುಳ, ಡಾ.ಶ್ರೀನಿವಾಸಪ್ರಸಾದ್ ಅವರ ಸ್ಫೂರ್ತಿಯ ಶಿಖರಗಳು ಕೃತಿ ಬಿಡುಗಡೆಗೊಳಿಸಲಾಯಿತು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ನರೇಂದ್ರ ಬಾಬು, ನಿರ್ಗಮಿತ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಹಾಜರಿದ್ದರು.

ಬೆಳಗಾವಿಯಲ್ಲಿ ಎಂಇಎಸ್ ಕನ್ನಡದ ಧ್ವಜ ಸುಟ್ಟಿರುವುದು ಹೇಯ ಕೃತ್ಯ. ಇದನ್ನು ಕಸಾಪ ಕಟುವಾಗಿ ಖಂಡಿಸಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದು ರಾಷ್ಟ್ರಭಕ್ತರಿಗೆ ಮಾಡಿರುವ ದ್ರೋಹ. ಈ ಸಂಬಂಧ ಕಸಾಪ ಸರ್ಕಾರದೊಂದಿಗೆ ಚರ್ಚಿಸಿದ್ದು, ಆರೋಪಿಗಳನ್ನು ಗುಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಎಂಇಎಸ್ ನಿಷೇಧಿಸಬೇಕು ಎನ್ನುವುದರಲ್ಲಿ ಕಸಾಪ ಮೊದಲ ಹೆಜ್ಜೆಯಲ್ಲಿರುತ್ತದೆ. ಮಹೇಶ ಜೋಶಿ, ಕಸಾಪ ಅಧ್ಯಕ್ಷ

ರೇಷ್ಮೆ-ಹಾಲು-ಪುಸ್ತಕ: ಕಸಾಪ ಜಿಲ್ಲಾ ಘಟಕದಿಂದ ಮಹೇಶ ಜೋಶಿ ಅವರಿಗೆ ರೇಷ್ಮೆ ಶಾಲು, ಹಾಲು ಹಾಗೂ ಕನ್ನಡ ಪುಸ್ತಕ ನೀಡಿ ಅಭಿನಂದಿಸಿದ್ದು ವಿಶೇಷವಾಗಿತ್ತು.

ಅನ್ಯಾಯವಾದರೆ ಸಹಿಸಲ್ಲ: ಅಪರಾಧ ಹಿನ್ನೆಲೆಯುಳ್ಳವರು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ. ಸರ್ಕಾರಿ ಸೇವೆಯಲ್ಲಿರುವವರೂ ಸ್ಪರ್ಧಿಸಬಾರದು ಎಂಬ ಆಗ್ರಹ ವ್ಯಕ್ತವಾಗಿರುವುದರಿಂದ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಕನ್ನಡ, ಕರ್ನಾಟಕ ವಿಚಾರದಲ್ಲಿ ಕನ್ನಡಿಗನಿಗೆ ಅನ್ಯಾಯ ಆಗುವುದಾದರೆ ಕೋರ್ಟ್ ಮೆಟ್ಟಿಲೇರಲೂ ಸಿದ್ಧ. ಗಡಿನಾಡಿನಲ್ಲಿ ಕನ್ನಡ ಶಾಲೆ ಮುಚ್ಚದಂತೆ ಕಸಾಪ ಪದಾಧಿಕಾರಿಗಳು ಎಚ್ಚರವಹಿಸಬೇಕು ಎಂದು ಮಹೇಶ ಜೋಶಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net