ಕೋಲಾರದಲ್ಲಿ ಆಗಾಗ ಸದ್ದು ಮಾಡುವ ಕಸದ ರಾಶಿಗಳು / ಕಸದ ರಾಶಿಗಳಿಂದ ಬೀದಿ ನಾಯಿಗಳ ಸಂತತಿ ಹೆಚ್ಚು / ಸ್ಪಂಧಿಸದ ನಗರಸಭೆಯ ಅಧಿಕಾರಿಗಳು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ನಗರದಲ್ಲಿ ಆಗಾಗ ಕಸದ ರಾಶಿಗಳು ಸದ್ದು ಮಾಡುತ್ತಲೇ ಇರುತ್ತವೆ. ರಸ್ತೆಗಳ ಪಕ್ಕದಲ್ಲಿ ಬೀಳುವ ತ್ಯಾಜ್ಯ ಚರಂಡಿ ಮತ್ತು ರಸ್ತೆಗಳನ್ನು ಆವರಿಸಿಕೊಳ್ಳುತ್ತಿವೆ. ವಾರಗಟ್ಟಲೆ ಕಸದ ರಾಶಿಗಳು ರಸ್ತೆ ಮತ್ತು ಚರಂಡಿಗಳಲ್ಲಿಯೇ ಕೊಳೆಯುವಂತೆ ಆಗಿದೆ.

ಕೋಲಾರ ನಗರದಲ್ಲಿನ ಸಾರ್ವಜನಿಕರಿಗೆ ಇದು ಮಾಮೂಲು ಎನಿಸಿಬಿಟ್ಟಿದೆ. ಕಸದ ಮಧ್ಯೆಯಲ್ಲಿಯೇ ಜೀವನ ಸಾಗಿಸಬೇಕೆಂಬುದು ಕರಗತವೂ ಆಗಿಬಿಟ್ಟಿದೆ. ನಗರಸಭೆಯವರನ್ನು ಕೇಳಿದರೆ ಪ್ರಯೋಜನವಿಲ್ಲ ಎನ್ನುವಂತಾಗಿದೆ.

ಈ ಹಿಂದೆ ಡಿ.ಕೆ.ರವಿಯವರು ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಕೋಲಾರ ಕ್ಲೀನ್ ಸಿಟಿ ಎಂಬ ಹೆಸರನ್ನು ಪಡೆದುಕೊಂಡಿತ್ತು. ಈಗ ಕೋಲಾರ ಕಸಕ್ಕೆ ಪ್ರಸಿದ್ಧಿ ಎನ್ನುವಂತಾಗಿದೆ. ನಗರಸಭೆಯಲ್ಲಿ ಸಿಬ್ಬಂದಿ ಕೊರತೆ, ವಾಹನ ಕೊರತೆ ಇದೆ ಎಂಬುದನ್ನು ಸಾರ್ವಜನಿಕರು ಕೇಳುವುದಿಲ್ಲ. ಸ್ವಚ್ಛತೆಯನ್ನು ಮಾತ್ರ ಕೇಳುತ್ತಾರೆ.

ನಗರದಲ್ಲಿ ರಸ್ತೆ, ಚರಂಡಿಗಳು ದುರಸ್ಥಿಯಾಗಬೇಕೆಂಬ ಕೂಗು ಇದೆ. ಇದರ ಮಧ್ಯೆ ಕಸ ವಿಲೇವಾರಿಯ ಸಮಸ್ಯೆಯು ಕೋಲಾರವನ್ನು ಕಾಡುತ್ತಿದೆ. ಇದು ಒಂದು ಬಡಾವಣೆಗೆ ಮಾತ್ರ ಸೀಮಿತವಾಗಿಲ್ಲ. ಕೋಲಾರ ನಗರದ ೩೫ ವಾರ್ಡುಗಳಲ್ಲಿನ ಸಮಸ್ಯೆಯು ಇದಾಗಿದೆ.

ನಗರದ ವ್ಯಾಪಾರ ಕೇಂದ್ರವಾಗಿರುವ ಎಂ.ಜಿ.ರಸ್ತೆ, ದೊಡ್ಡಪೇಟೆ, ಅಮ್ಮಾವಾರಿಪೇಟೆ, ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಇದೇ ಸಮಸ್ಯೆ ಉಂಟಾಗಿದೆ. ತ್ಯಾಜ್ಯವನ್ನು ಪ್ರಮುಖ ರಸ್ತೆಗಳಲ್ಲಿ ಜನರಿಗೆ ಕಾಣುವ ಕಡೆಗಳಲ್ಲಿ ತೆರವು ಮಾಡುತ್ತಾರೆ. ಸಂದಿ ರಸ್ತೆಗಳಲ್ಲಿ ಕಸದ ರಾಶಿಗಳು ವಾರಗಟ್ಟಲೆ ಕೊಳೆಯುವಂತೆ ಆಗಿದೆ.

ಅಲ್ಪಸಂಖ್ಯಾತರು ವಾಸಿಸುವ ಬಡಾವಣೆಗಳಲ್ಲಂತು ವಾರಗಟ್ಟಲೆ ಕಸದ ರಾಶಿಗಳು ಕೊಳೆಯುವಂತೆ ಆಗಿದೆ. ೩೧ನೇ ವಾರ್ಡಿನ ರಹಮತ್ ನಗರ, ಶಾಂತಿ ನಗರ, ನೂರ್ ನಗರ, ಗಲ್‌ಪೇಟೆ ಪೋಲಿಸ್ ಠಾಣೆಯ ಸುತ್ತಲೂ ಮತ್ತು ಗಲ್‌ಪೇಟೆಯಲ್ಲಿ ಕಸದ ರಾಶಿಗಳು ತಾಂಡವವಾಡುತ್ತಿವೆ.

ತೇರಹಳ್ಳಿ ಬೆಟ್ಟದಿಂದ ನಗರದ ಮೂಲಕ ಕೋಲಾರಮ್ಮ ಕೆರೆಗೆ ಹೋಗುವ ರಾಜಕಾಲುವೆಯಲ್ಲಿ ತ್ಯಾಜ್ಯ ತುಂಬಿದೆ. ರಾಜಕಾಲುವೆಗೆ ಅಳವಡಿಸಿರುವ ತಂತಿ ಬೇಲಿ ಅಲ್ಲಿ ಕಿತ್ತು ಹೋಗಿದ್ದು, ಅಕ್ಕಪಕ್ಕದ ಮನೆಗಳವರು ತ್ಯಾಜ್ಯವನ್ನು ರಾಜಕಾಲುವೆಗೆ ಎಸೆಯುತ್ತಿದ್ದಾರೆ. ರಾಜ ಕಾಲುವೆಯ ಪಕ್ಕದಲ್ಲಿಯೇ ಕಸದ ರಾಶಿಗಳು ಬಿದ್ದಿದ್ದು, ಮಳೆ ಬಂದರೆ ಮತ್ತು ಗಾಳಿಗೆ ಪ್ಲಾಸ್ಟಿಕ್ ಸೇರಿದಂತೆ ಹಗುರವಾದ ತ್ಯಾಜ್ಯ ರಾಜ ಕಾಲುವೆ ಸೇರುವಂತಾಗಿದೆ.

ರಾಜಕಾಲುವೆಯನ್ನು ಸ್ವಚ್ಛಗೊಳಿಸಿ ಸುಮಾರು ವರ್ಷಗಳೇ ಕಳೆದಿವೆ. ಮಳೆಗಾಲ ಪ್ರಾರಂಭವಾದರೆ ತ್ಯಾಜ್ಯ ಕಾಲುವೆ ಮೂಲಕ ಕೆರೆ ಸೇರುವಂತೆ ಆಗಿದೆ. ಬೇಸಿಗೆ ಕಾಲದಲ್ಲಿ ಕಾಲುವೆಯಲ್ಲಿ ಬೆಳೆದಿರುವ ಹುಲ್ಲನ್ನು ಮೇಯ್ದು ದನಗಳು ರಾಜಕಾಲುವೆಗೆ ಇಳಿಯುತ್ತವೆ. ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ಹುಲ್ಲಿನ ಜೊತೆಯಲ್ಲಿ ದನಗಳ ಹೊಟ್ಟೆ ಸೇರುತ್ತಿವೆ.

ಗಮನ ಹರಿಸದ ನಗರಸಭೆಯವರು :

ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆ, ಕಸ ವಿಲೇವಾರಿ ಮಾಡಲು ಸ್ಥಳಾವಕಾಶ, ವಾಹನಗಳ ಕೊರತೆ, ಚಾಲಕರ ಕೊರತೆ ಮುಂತಾದ ಸಬೂಬುಗಳನ್ನು ಹೇಳಿಕೊಂಡೇ ಕಾಲ ಕಳೆಯುತ್ತಿದೆ. ನಗರಸಭೆ ಅಧಿಕಾರಿಗಳು ನಮ್ಮ ಗಮನಕ್ಕೆ ತಂದರೆ ಸ್ವಚ್ಛಗೊಳಿಸುತ್ತೇವೆ ಎಂದು ಹಾರಿಕೆ ಉತ್ತರಗಳನ್ನು ನೀಡುತ್ತಲೇ ದಿನ ಕಳೆಯುತ್ತಿದ್ದಾರೆ.

ವಾರ್ಡುಗಳಿಂದ ಆಯ್ಕೆ ಆಗಿರುವ ನಗರಸಭೆ ಸದಸ್ಯರ ಕಣ್ಣಿಗೆ ಕಸದ ರಾಶಿಗಳು ಕಂಡರೂ ಕಾಣದಂತೆ ಓಡಾಡುತ್ತಿದ್ದಾರೆ. ಸಾರ್ವಜನಿಕರು ಕಸದ ಬಗ್ಗೆ ಸದಸ್ಯರ ಗಮನಕ್ಕೆ ತಂದು ಒಂದು ವಾರವಾದರೂ ಕಸದ ವಿಲೇವಾರಿ ಆಗುತ್ತಿಲ್ಲ. ಬೀದಿ ದೀಪಗಳು ಇಲ್ಲ, ನಾಯಿಗಳ ಹಾವಳಿ ಹೆಚ್ಚಾಗಿವೆ ಎಂಬ ಆರೋಪವನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net