ಕೋಲಾರ ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಲು ಹಿಂದಿನ ಜಿಲ್ಲಾಧಿಕಾರಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ / ಕೋಲಾರಕ್ಕೆ ಪಾಲಿಕೆ ಪಟ್ಟ ಸಿಗುವುದೇ? / ಗ್ರಾಮಗಳ ಸೇರ್ಪಡೆಗೆ ಗ್ರಾಮಸ್ಥರ ವಿರೋಧ!

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ನಗರವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ನಗರಸಭೆಯನ್ನು ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕಸರತ್ತು ನಡೆಯುತ್ತಿದ್ದು, ಡಿ.೧೯ ರಂದು ಹಿಂದಿನ ಜಿಲ್ಲಾಧಿಕಾರಿ ಅಕ್ರಂಪಾಷ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದು ಕೋಲಾರದ ಸ್ಥಿತಿಗತಿಯನ್ನು ವಿವರಿಸಿದ್ದಾರೆ.

ಕೋಲಾರ ನಗರದ ಜೊತೆಗೆ ಹೊರವಲಯದ ೦೮ ಗ್ರಾಮಪಂಚಾಯ್ತಿಗಳ ಸ್ಯಾಟಲೈಟ್ ನಕ್ಷೆ ಹಾಗೂ ಸಂಬAಧಿಸಿದ ದಾಖಲೆಗಳನ್ನು ಕೂಡ ಕಳುಹಿಸಿಕೊಟ್ಟಿದ್ದಾರೆ.

ಕೋಲಾರ ನಗರ ಅಭಿವೃದ್ಧಿ ಮುಂದಾಲೋಚನೆಯ ದೃಷ್ಟಿಯಿಂದ ಸುಮಾರು ೧೫ ಕಿ.ಮೀ. ವ್ಯಾಪ್ತಿಯಲ್ಲಿ ೦೮ ಗ್ರಾಮಪಂಚಾಯ್ತಿಗಳಿದ್ದು, ಅವುಗಳನ್ನು ಸೇರ್ಪಡೆ ಮಾಡಿದರೆ ಜನಸಂಖ್ಯೆ ೩,೦೨,೧೦೬ ಆಗಲಿದೆ. ೦೮ ಗ್ರಾಮಪಂಚಾಯ್ತಿಗಳು ಸೇರಿಕೊಂಡು ಕೋಲಾರ ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಯನ್ನು ತಮ್ಮ ಅವಗಾಹನೆಗೆ ದಾಖಲೆಗಳ ಸಮೇತ ಸಲ್ಲಿಸಲಾಗಿದೆ ಎಂದು ಹಿಂದಿನ ಜಿಲ್ಲಾಧಿಕಾರಿ ಅಕ್ರಂಪಾಷ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕೋಲಾರದ ಜನಸಂಖ್ಯೆ ೨೦೧೧ರ ಜನಗಣತಿಯ ಪ್ರಕಾರ ೧,೩೮,೪೬೨ ಜನಸಂಖ್ಯೆ ಇದೆ. ನಗರಸಭೆಯ ವ್ಯಾಪ್ತಿಯು ೧೮.೧೩ ಚದರ ಕಿಲೋಮೀಟರ್ ಇದೆ. ೨೦೨೪ರ ನಿರೀಕ್ಷಿತ ಜನಸಂಖ್ಯೆಯು ೧,೯೯,೨೦೭ ಇದ್ದು, ಜನಸಾಂದ್ರತೆಯ ಪ್ರತಿ ಚದರ ಕಿ.ಮೀಟರ್ ಗೆ ೭.೬೩೨ ಇರುತ್ತದೆ.

ಕೋಲಾರ ನಗರವು ಬೆಂಗಳೂರು ನಗರಕ್ಕೆ ೬೬ ಕಿ.ಮೀ ಅಂತರದಲ್ಲಿದ್ದು, ರಾಷ್ಟಿçÃಯ ಹೆದ್ದಾರಿ ೭೫ ಹಾದು ಹೋಗಿದೆ. ಚನೈ ಮತ್ತು ತಿರುಪತಿ ಸಂಪರ್ಕಿಸುತ್ತದೆ. ನಗರದಿಂದ ೧೫ ಕಿ.ಮೀ ಅಂತರದಲ್ಲಿ ನರಸಾಪುರ ಕೈಗಾರಿಕಾ ಪ್ರದೇಶವಿದೆ. ಆ್ಯಪಲ್, ಹೋಂಡಾ, ಮಹೇಂದ್ರ, ಏರೋಸ್ಪೇಸ್ ಸೇರಿದಂತೆ ಪ್ರಸಿದ್ಧ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಇದಲ್ಲದೆ ಶ್ರೀದೇವರಾಜು ಅರಸು ವೈದ್ಯಕೀಯ ಕಾಲೇಜು, ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಸಿ.ಬೈರೇಗೌಡ ತಾಂತ್ರಿಕ ಮಹಾ ವಿದ್ಯಾಲಯ, ತೋಟಗಾರಿಕೆ ಕಾಲೇಜು ಇದ್ದು, ಸುತ್ತಮುತ್ತ ಹಲವಾರು ಪ್ರಸಿದ್ಧ ಪ್ರವಾಸಿ ತಾಣಗಳಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಕೋಲಾರ ನಗರದ ಪ್ಲೋಟಿಂಗ್ ಜನಸಂಖ್ಯೆ ಸುಮಾರು ೧೫ ಸಾವಿರದಷ್ಟು ಹೆಚ್ಚಳವಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚೆಗಷ್ಟೆ ಗ್ರಾಮಗಳ ನಕ್ಷೆ ಕೋರಿ ಜಿಲ್ಲಾಧಿಕಾರಿಯು ಬೆಂಗಳೂರಿನ ಯಲಹಂಕದಲ್ಲಿರುವ ಕರ್ನಾಟಕ ರಾಜ್ಯ ದೂರು ಸಂವೇದಿ ಅನ್ವಯಿಕ ಕೇಂದ್ರಕ್ಕೆ ಪತ್ರ ಬರೆದಿದ್ದು, ನಗರದಿಂದ ಸುಮಾರು ೧೫ ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಹೊನ್ನೇನಹಳ್ಳಿ, ಅರಹಳ್ಳಿ, ಕೊಂಡರಾಜನಹಳ್ಳಿ, ದೊಡ್ಡಹಸಾಳ, ಅರಾಭಿಕೊತ್ತನೂರು, ಸೂಲೂರು, ನರಸಾಪುರ, ಬೆಳ್ಳೂರು ಗ್ರಾಮಪಂಚಾಯ್ತಿಗಳ ಸ್ಯಾಟಲೈಟ್ ನಕ್ಷೆ ಕಳುಹಿಸಿಕೊಡುವಂತೆ ಕೋರಿದ್ದರು.

ಬೆಂಗಳೂರು ಸಮೀಪವಿದ್ದರೂ ಕೋಲಾರ ನಗರ ಅಭಿವೃದ್ಧಿಯಲ್ಲಿ ಬಾರಿ ಹಿನ್ನಡೆ ಹೊಂದಿದೆ. ನಗರದ ರಸ್ತೆಗಳಾಗಲೀ, ಚರಂಡಿ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ, ಶುದ್ಧ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ಈ ನಿಟ್ಟಿನಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕೂಡ ಪೌರಾಡಳಿತ ಇಲಾಖೆಗೆ ಪತ್ರ ಬರೆದು ನಗರಪಾಲಿಕೆ ಪಟ್ಟಕ್ಕೆ ಕೋರಿದ್ದರು.

ಮಹಾನಗರಪಾಲಿಕೆಯಾಗಿ ರೂಪಗೊಳ್ಳಲು ಬೇಕಿರುವ ನಿಗಧಿತ ಮಾನದಂಡಗಳನ್ನು ಸದ್ಯಕ್ಕೆ ಕೋಲಾರ ನಗರಸಭೆ ತಲುಪಿಲ್ಲ. ಕನಿಷ್ಠ ೦೩ ಲಕ್ಷ ಜನಸಂಖ್ಯೆ ಇರಬೇಕು. ಈ ನಿಟ್ಟಿನಲ್ಲಿ ನಗರಕ್ಕೆ ಅಂಟಿಕೊAಡೇ ಇರುವ ಗ್ರಾಮಪಂಚಾಯ್ತಿಗಳನ್ನು ಸೇರಿಸಲು ಕಸರತ್ತು ನಡೆದಿದೆ. ಒಟ್ಟು ವಿಸ್ತೀರ್ಣ, ಜನಸಂಖ್ಯೆ ಆದಾಯ, ಕಮರ್ಷಿಯಲ್ ಸ್ಥಿತಿಗತಿಯ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಪಾಲಿಕೆ ಪಟ್ಟ ಒಲಿದರೆ ನಗರದ ಅಭಿವೃದ್ಧಿಗೆ ಅನುದಾನ ಹೆಚ್ಚು ಬರುತ್ತದೆ ಎಂಬ ನಿಟ್ಟಿನಲ್ಲಿ ನಗರಸಭಾ ಸದಸ್ಯರು ಕೂಡ ಪ್ರಯತ್ನ ಹಾಕುತ್ತಿದ್ದಾರೆ.

ವಿರೋಧ :

ಕೋಲಾರ ನಗರವನ್ನೇ ಅಭಿವೃದ್ಧಿಪಡಿಸಲು ನಗರಸಭೆಯಿಂದ ಸಾಧ್ಯವಾಗಿಲ್ಲ. ಇನ್ನು ಮಹಾನಗರಪಾಲಿಕೆ ಮಾಡಿ ಗ್ರಾಮಪಂಚಾಯ್ತಿಗಳನ್ನು ಸೇರ್ಪಡೆ ಮಾಡಿಕೊಂಡರೆ ಆ ಗ್ರಾಮಗಳಿಗೆ ನಗರದ ಗತಿಯೇ ಬರುತ್ತದೆ. ಈಗಲಾದರೂ ಗ್ರಾಮಪಂಚಾಯ್ತಿ ವತಿಯಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಗ್ರಾಮಪಂಚಾಯ್ತಿಗಳ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬಾಕ್ಸ್

ನಗರಸಾಪುರ, ಬೆಳ್ಳೂರು, ಅರಾಭಿಕೊತ್ತನೂರು, ಸೂಲೂರು ಗ್ರಾಮಪಂಚಾಯ್ತಿಗಳವರು ಈಗಾಗಲೇ ಮಹಾನಗರಪಾಲಿಕೆಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನರಸಾಪುರ ಕೈಗಾರಿಕಾ ಪ್ರಾಂಗಣವಾಗಿರುವುದರಿAದ ನರಸಾಪುರ ಮತ್ತು ಬೆಳ್ಳೂರು ಗ್ರಾಮಪಂಚಾಯ್ತಿಗಳನ್ನು ಪಟ್ಟಣಪಂಚಾಯ್ತಿಯನ್ನಾಗಿ ಮಾಡಿಸಲು ಅಲ್ಲಿನ ಜನಪ್ರತಿನಿಧಿಗಳು ಮುಂದಾಗಿದ್ದು, ಸರ್ಕಾರಕ್ಕೆ ಮತ್ತು ಶಾಸಕರಿಗೆ ಮನವಿ ಸಹ ಸಲ್ಲಿಸಿದ್ದಾರೆ.

ಕೋಟ್

ಮಹಾನಗರಪಾಲಿಕೆಯನ್ನಾಗಿ ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಬೇಕಾದರೆ ಕೋಲಾರಕ್ಕೆ ಹೊಂದಿಕೊAಡಿರುವ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಶೇ.೫೦ ರಷ್ಟಕ್ಕೂ ಹೆಚ್ಚು ಕೃಷಿ ಭೂಮಿಯನ್ನು ಹೊಂದಿರುವ ಗ್ರಾಮಪಂಚಾಯ್ತಿ ವ್ಯಾಪ್ತಿಯನ್ನು ಸೇರಿಸಿಕೊಳ್ಳಲು ಕೆಲವು ಕಾನೂನು ತೊಡಕುಗಳು ಎದುರಾಗುತ್ತವೆ. ಹೊನ್ನೇನಹಳ್ಳಿ, ಅರಹಳ್ಳಿ, ಕೊಂಡರಾಜನಹಳ್ಳಿ, ದೊಡ್ಡಹಸಾಳ ಈ ಗ್ರಾಮಪಂಚಾಯ್ತಿಗಳು ನಗರಕ್ಕೆ ಸಮೀಪ ಇವೆ. ಇತರೆ ಗ್ರಾಮಪಂಚಾಯ್ತಿಗಳು ನಗರಕ್ಕೆ ದೂರದಲ್ಲಿವೆ. ಈಗಾಗಲೇ ಕೆಲವು ಗ್ರಾಮಪಂಚಾಯ್ತಿಗಳ ಜನಪ್ರತಿನಿಧಿಗಳು ಮತ್ತು ಮುಖಂಡರು ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದಿನ ಭಾನುವಾರ ಸೇರ್ಪಡೆಯಾಗುವ ಗ್ರಾಮಪಂಚಾಯ್ತಿಗಳ ಮತ್ತು ಕೋಲಾರ ನಗರದ ಜನಪ್ರತಿನಿಧಿಗಳ ಮುಖಂಡರ, ಚಿಂತಕರ ಸಭೆ ಕರೆದು ಸಾಧಕ ಬಾಧಕಗಳನ್ನು ಚರ್ಚೆ ಮಾಡಲಾಗುವುದು.

-ಮುರಳೀಗೌಡ, ನಗರಸಭಾ ಸದಸ್ಯರು, ಕೋಲಾರ.

ಚಿತ್ರ ೨೯ ಕೆ.ಎಲ್.ಆರ್. ೦೧ : ಕೋಲಾರ ನಗರಸಭೆ

ಚಿತ್ರ ೨೯ ಕೆ.ಎಲ್.ಆರ್. ೦೧ಎ : ಮುರಳೀಗೌಡ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net