ಕೋಲಾರ ಜಿಲ್ಲೆಗೆ ನೂತನ ಜಿಲ್ಲಾ ರಕ್ಷಣಾಧಿಕಾರಿಯಾಗಿ ಬಿ.ನಿಖಿಲ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆಗೆ ನೂತನ ಜಿಲ್ಲಾ ರಕ್ಷಣಾಧಿಕಾರಿಗಳಾಗಿ ಬಿ.ನಿಖಿಲ್ ರವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ರಾಯಚೂರಿನಲ್ಲಿ ಎಸ್.ಪಿ. ಆಗಿದ್ದ ಬಿ. ನಿಖಿಲ್ ರವರನ್ನು ಕೋಲಾರಕ್ಕೆ ವರ್ಗಾವಣೆ ಮಾಡಿದ್ದಾರೆ.

ಕೋಲಾರದಲ್ಲಿ ಎಸ್.ಪಿ.ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ನಾರಾಯಣ್ ರವರನ್ನು ಉತ್ತರಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ನೇರ ಐ.ಪಿ.ಎಸ್. ಗ್ರೇಡ್ ಅಧಿಕಾರಿಯಾಗಿದ್ದ ಕಾರ್ತಿಕ್ ರೆಡ್ಡಿ ಕೋಲಾರದಿಂದ ವರ್ಗಾವಣೆಯಾದ ೦೪ ವರ್ಷಗಳ ನಂತರ ಬಿ.ನಿಖಿಲ್ ರವರನ್ನು ನೇರ ಐ.ಪಿ.ಎಸ್.ಗ್ರೇಡ್ ಅಧಿಕಾರಿಯಾಗಿ ಕೋಲಾರಕ್ಕೆ ಸರ್ಕಾರ ವರ್ಗಾವಣೆ ಮಾಡಿದೆ.

ರಾಯಚೂರಿನಲ್ಲಿ ಎಸ್.ಪಿ. ಬಿ.ನಿಖಿಲ್ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಹಿನ್ನಲೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಯಾವ ರಾಜಕಾರಣಿಗಳ ಶಿಫಾರಸ್ಸಿಗೂ ಮಣಿಯದ ಪೋಲಿಸ್ ಇಲಾಖೆ ಕೋಲಾರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವ ಸಲುವಾಗಿ ಪೋಲಿಸ್ ಇಲಾಖೆಯ ಉನ್ನತ ಮಟ್ಟದಲ್ಲಿ ಅಧಿಕಾರಿಗಳು ತೀರ್ಮಾನ ತೆಗೆದುಕೊಂಡು ಬಿ.ನಿಖಿಲ್ ರವರನ್ನು ಕೋಲಾರ ಜಿಲ್ಲೆಗೆ ಎಸ್.ಪಿ.ಯಾಗಿ ವರ್ಗಾವಣೆ ಮಾಡಲಾಗಿದೆ.

ಬಿ.ನಿಖಿಲ್ ರವರು ನೇರ ಐ.ಪಿ.ಎಸ್.ಗ್ರೇಡ್ ಅಧಿಕಾರಿಯಾಗಿದ್ದು, ಕಾರ್ತಿಕ್ ರೆಡ್ಡಿ ನಂತರ ಕೋಲಾರಕ್ಕೆ ನೇರ ಐ.ಪಿ.ಎಸ್.ಅಧಿಕಾರಿಯಾಗಿ ಆಗಮಿಸುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಕಳೆದ ೦೨ ವರ್ಷಗಳಿಂದ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಕೊಲೆ, ದರೋಡೆ, ಸರಗಳ್ಳತನ ಸೇರಿದಂತೆ ವಿವಿಧ ಅಪರಾಧ ಪ್ರಕರಣ ಸಂಖ್ಯೆಗಳು ಹೆಚ್ಚಾಗಿದ್ದವು.

ಆದರೂ ಪೋಲಿಸ್ ಇಲಾಖೆ ಧೃತಿಗೆಡದೆ ಧೈರ್ಯವಾಗಿ ಪ್ರಕರಣಗಳನ್ನು ಭೇಧಿಸುವ ಕೆಲಸ ಮಾಡುತ್ತಿದ್ದರು. ಆದರೂ ಅಪರಾಧ ಪ್ರಕರಣಗಳು ಎಗ್ಗು ಸಿಗ್ಗು ಇಲ್ಲದಂತೆ ನಡೆಯುತ್ತಿದ್ದವು. ಇದರಿಂದ ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಪೋಲಿಸ್ ಇಲಾಖೆಯು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಲೇ ಇತ್ತು. ಆದರೆ ಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುವ ಬದಲು ಏರುಮುಖವಾಗತೊಡಗಿದವು.

ಇದರಿಂದ ಕೋಲಾರ ಜಿಲ್ಲೆಯ ಬಗ್ಗೆ ಉನ್ನತ ಮಟ್ಟದ ಪೋಲಿಸ್ ಅಧಿಕಾರಿಗಳಲ್ಲಿ ಸಂಶಯ ಮೂಡುವಂತೆ ಆಗಿದ್ದು, ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಬೇಕೆಂದು ಖಡಕ್ ಅಧಿಕಾರಿ ಒಬ್ಬರನ್ನು ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಬೇಕೆಂದು ಚಿಂತನೆ ಪೋಲಿಸ್ ಇಲಾಖೆಯಲ್ಲಿ ಇತ್ತು.

ಕೋಲಾರದ ಶಾಸಕರು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಕೋಲಾರಕ್ಕೆ ಖಡಕ್ ನೇರ ಐ.ಪಿ.ಎಸ್.ಅಧಿಕಾರಿಯನ್ನು ನೀಡಬೇಕೆಂಬ ಒತ್ತಾಯವೂ ಸರ್ಕಾರದ ಮೇಲೆ ತರುತ್ತಿದ್ದರು. ಆದರೆ ಇಂಥಹವರೇ ಬೇಕೆಂದು ಶಿಫಾರಸ್ಸು ಮಾಡದೆ ಇಲಾಖೆಗೇ ಬಿಟ್ಟಿದ್ದರು. ಇಲಾಖೆ ಅಳಿದು ತೂಗಿ ಕೋಲಾರಕ್ಕೆ ನೇರ ಐ.ಪಿ.ಎಸ್.ಅಧಿಕಾರಿಯೊಬ್ಬರನ್ನು ಎಸ್.ಪಿ.ಯಾಗಿ ನೇಮಕ ಮಾಡಿದೆ.

ಕೋಲಾರದಲ್ಲಿ ಎಸ್.ಪಿ.ಯಾಗಿದ್ದ ಎಂ.ನಾರಾಯಣ್ ಬುಧವಾರ ಮಧ್ಯಾಹ್ನ ಕೋಲಾರದಿಂದ ಬಿಡುಗಡೆಯಾಗಿದ್ದಾರೆ. ರಾಯಚೂರು ಎಸ್.ಪಿ.ಯಾಗಿದ್ದ ಬಿ.ನಿಖಿಲ್ ರಾಯಚೂರಿನಿಂದ ಬುಧವಾರವೇ ಬಿಡುಗಡೆಯಾಗಿದ್ದು, ಗುರುವಾರ ಅಧಿಕಾರ ಹಸ್ತಾಂತರ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಚಿತ್ರ ೦೩ ಕೆ.ಎಲ್.ಆರ್. ೦೧ : ಬಿ.ನಿಖಿಲ್ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net