ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ ರವರ ವರ್ಗಾವಣೆ ಕುರಿತು ರಾಜಕೀಯ ಪಡಶಾಲೆಯಲ್ಲಿ ಚರ್ಚೆಯಾಗುತ್ತಿದ್ದು, ಅವರ ಸ್ಥಾನಕ್ಕೆ ಹೊಸದಾಗಿ ಬರುವ ಜಿಲ್ಲಾಧಿಕಾರಿ ಯಾರು ಎಂಬುದರ ಬಗ್ಗೆಯೂ ಚರ್ಚೆಯಾಗುತ್ತಿದೆ. ಸಮುದಾಯಕ್ಕೆ ಸೇರಿದ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಬೇಕೆಂಬುದರ ಬಗ್ಗೆಯೂ ರಾಜಯಕೀಯ ವಲಯದಲ್ಲಿ ಚರ್ಚೆಯಾಗತೊಡಗಿದೆ.
ಹಾಲಿ ಜಿಲ್ಲಾಧಿಕಾರಿ ಅಕ್ರಂಪಾಷ ಕೋಲಾರಕ್ಕೆ ಬಂದು ಒಂದೂವರೆ ವರ್ಷ ಆಗಿದ್ದು, ಕೋಲಾರದಲ್ಲಿ ಯಾವೊಬ್ಬ ಜಿಲ್ಲಾಧಿಕಾರಿ ೨ ವರ್ಷಕ್ಕಿಂತ ಮೇಲ್ಪಟ್ಟು ಕೆಲಸ ಮಾಡಿಲ್ಲ. ಎರಡು ವರ್ಷಕ್ಕೂ ಮುಂಚಿತವಾಗಿಯೇ ವರ್ಗಾವಣೆಯಾಗಿರುವ ಉದಾಹರಣೆಗಳು ಇವೆ.
ಹಾಲಿ ಜಿಲ್ಲಾಧಿಕಾರಿ ಕೋಲಾರಕ್ಕೆ ಬಂದ ನಂತರ ಕಂದಾಯ ಇಲಾಖೆಯಲ್ಲಿ ವರ್ಷಾನುಗಟ್ಟಲೆ ಕೊಳೆಯುತ್ತಿದ್ದ ಕಡತಗಳ ವಿಲೇವಾರಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಿ, ಮೈಗಳ್ಳ ಅಧಿಕಾರಿಗಳಿಂದ ಕೆಲಸ ಮಾಡಿಸುವುದು ಮುಂದಾಗಿ ಇದರಿಂದ ಕೋಲಾರ ಕಂದಾಯ ಇಲಾಖೆ ರಾಜ್ಯದಲ್ಲಿ ನಂ.೧ ಸ್ಥಾನಕ್ಕೆ ಬರುವಂತೆ ಮಾಡುವ ಹೆಗ್ಗಳಿಕೆಯು ಜಿಲ್ಲಾಧಿಕಾರಿಗೆ ಸೇರಿದೆ. ಕೆಲವೊಂದು ವಿಷಯಗಳಲ್ಲಿ ವಿರೋಧಪಕ್ಷ ನಾಯಕರ ಬಾಯಿಗೆ ಆಹಾರವೂ ಆಗಿದ್ದು ಉಂಟು.
ಜಿಲ್ಲಾಧಿಕಾರಿ ಅಕ್ರಂಪಾಷ ರವರ ವರ್ಗಾವಣೆಯ ವಿಷಯ ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಪರ್ಯಾಯವಾಗಿ ಮತ್ತೊಬ್ಬ ಅಧಿಕಾರಿಯನ್ನು ನೇಮಕ ಮಾಡುವ ವಿಷಯ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಾಂಗ್ರೇಸ್ ಶಾಸಕರುಗಳ ಪ್ರತಿಷ್ಠತೆಯೂ ಆಗಿದೆ.
ಶಾಸಕ ಎಸ್.ಎನ್.ಅಸಮಾಧಾನ :
ಜಿಲ್ಲಾಧಿಕಾರಿ ವರ್ಗಾವಣೆ ವಿಷಯ ಮತ್ತು ಮತ್ತೊಬ್ಬರನ್ನು ಪರ್ಯಾಯವಾಗಿ ನೇಮಿಸುವ ವಿಚಾರವಾಗಿ ಬಂಗಾರಪೇಟೆಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಅಸಮಾಧಾನವನ್ನು ಹೊರ ಹಾಕಿದ್ದು, ಸುಮ್ಮನೆಯಿದ್ದ ನನ್ನನ್ನು ಈ ವಿಚಾರವಾಗಿ ಮುನ್ನಲೆಗೆ ತರುವಂತೆ ಸಚಿವ ಬೈರತಿ ಸುರೇಶ್, ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್ ಮಾಡಿದ್ದಾರೆ. ಹಾಲಿ ಜಿಲ್ಲಾಧಿಕಾರಿ ಅಕ್ರಂಪಾಷ ವಿರುದ್ಧ ನನ್ನದೇನು ತಕರಾರು ಇರಲಿಲ್ಲ.
ಬಲಗೈ ಸಮುದಾಯಕ್ಕೆ ಸೇರಿದ ಎನ್.ಎಂ.ನಾಗರಾಜ್ ರವರನ್ನು ಕೋಲಾರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿಸಲು ನಿಮ್ಮ ಸಹಕಾರ ಬೇಕು ಎಂದು ಮನವೊಲಿಸಿ ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು ನನ್ನಿಂದಲೂ ಪತ್ರ ಕೊಡಿಸಿದರು. ಆದರೆ ಈಗ ಮತ್ತೊಬ್ಬ ಮಹಿಳಾ ಅಧಿಕಾರಿಯೊಬ್ಬರನ್ನು ಕೋಲಾರ ಜಿಲ್ಲಾಧಿಕಾರಿಯಾಗಿ ಕರೆತರಬೇಕೆಂದು ಲಾಬಿ ಮಾಡುತ್ತಿದ್ದಾರೆ ಎಂದು ಅಸಮಾಧಾನವನ್ನು ಹೊರ ಹಾಕಿ ಮಾಧ್ಯಮಗಳೊಂದಿಗೆ ಹಂಚಿಕೊAಡಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಮೊದಲಿನಿಂದಲೂ ಈ ಜನಾಂಗಕ್ಕೆ ಅನ್ಯಾಯ ಆಗಿದೆ. ಎನ್.ಎಂ.ನಾಗರಾಜ್‌ರನ್ನು ಕೋಲಾರಕ್ಕೆ ಹಾಕಿಸಬೇಕು ಎಂದು ಹೇಳಿದವರೇ ಇದೀಗ ಉಲ್ಟಾ ಹೊಡೆಯುತ್ತಿರುವುದು ಇದು ಸರಿಯಲ್ಲ. ಹಾಗಿದ್ದ ಮೇಲೆ ನನ್ನ ಪಾಡಿಗೆ ನಾನಿದ್ದಾಗ ಬಂದು ಪುಸಲಾಯಿಸಿ ಇದೀಗ ಬೇರೊಬ್ಬರ ಪರವಾಗಿ ಲಾಬಿ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದರು.
ಮೊದಲಿನಿಂದಲೂ ಜಿಲ್ಲೆಯಲ್ಲಿ ಬಲಗೈ ಸಮುದಾಯದವರಿಗೆ ಅನ್ಯಾಯ ಆಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತದಾರರು ಇರುವ ಬಲಗೈ ಸಮುದಾಯಕ್ಕೇ ಅವಕಾಶ ಕೊಡಬೇಕು ಎಂಬ ಒತ್ತಾಯವನ್ನು ಕಡೆಗಣಿಸಿ ಬೇರೆಯವರಿಗೆ ಟಿಕೆಟ್ ನೀಡಲಾಯಿತು. ಇದರಿಂದ ಸುಲಭವಾಗಿ ಗೆಲ್ಲಬಹುದಾಗಿದ್ದ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು ಎಂದು ಎಸ್.ಎನ್.ನಾರಾಯಣಸ್ವಾಮಿ ವಿಷಾದಿಸಿದರು.
ಇದೀಗ ಅನಗತ್ಯವಾಗಿ ಬಲಗೈ ಸಮುದಾಯದ ಹೆಸರನ್ನು ಜಿಲ್ಲಾಧಿಕಾರಿ ಹುದ್ದೆಗೆ ಪ್ರಸ್ತಾಪಿಸಿ ತಮ್ಮ ಕಾರ್ಯಸಾಧನೆ ಆದ ನಂತರ ನಿಲುವು ಬದಲಾಯಿಸಿಕೊಳ್ಳುವ ಮೂಲಕ ಈ ಜನಾಂಗಕ್ಕೆ ಅನ್ಯಾಯ ಮಾಡುತ್ತಿರುವ ಹಿಂದಿನ ಉದ್ದೇಶ ಏನು? ಇದನ್ನು ಜಿಲ್ಲೆಯ ಜನತೆ ಗಂಭೀರವಾಗಿ ಪರಿಗಣಿಸಿದರೆ ಅದರ ಪರಿಣಾಮ ನಮ್ಮ ಪಕ್ಷದ ಮೇಲೆಯೇ ಆಗುತ್ತದೆ. ಅದಕ್ಕೆ ಅವಕಾಶ ಕೊಡಬಾರದು ಎಂದು ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವೆ ಎಂದು ಎಸ್.ಎನ್ ವಿವರಿಸಿದರು.
ಜಿಲ್ಲಾಧಿಕಾರಿ ನೇಮಕ ವಿಷಯದಲ್ಲಿ ಸಮುದಾಯ ಮುನ್ನೆಲೆಗೆ :
ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ಸಮುದಾಯ ವಿಷಯ ಚರ್ಚೆಗೆ ಬರುತ್ತಿದ್ದು, ಇತ್ತೀಚೆಗೆ ಅದು ಅಧಿಕಾರಿಗಳ ವರ್ಗಾವಣೆಗೆ ರಾಜಕೀಯ ಲೇಪ ಹಚ್ಚುವ ಕೆಲಸ ರಾಜಕಾರಣಿಗಳು ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗತೊಡಗಿದೆ. ಕಳೆದ ಲೋಕಸಭಾ ಚುನಾವಣೆಯ ಟಿಕೇಟ್‌ಗಾಗಿ ಕಾಂಗ್ರೇಸ್ ಪಕ್ಷದಲ್ಲಿ ಸಮುದಾಯದ ಚರ್ಚೆಗೆ ಬಂದು ಅದು ಶಾಸಕರುಗಳ ರಾಜೀನಾಮೆಯ ತನಕ ತಲುಪಿತ್ತು. ಇಡೀ ರಾಜ್ಯವೇ ಕೋಲಾರದ ಕಡೆ ನೋಡುವಂತಾಯಿತು. ಇದೀಗ ಜಿಲ್ಲಾಧಿಕಾರಿಗಳನ್ನು ಕೋಲಾರಕ್ಕೆ ತರುವ ವಿಷಯವು ಸಮುದಾಯದ ಚರ್ಚೆಗೆ ಕಾರಣವಾಗಿದೆ. ಇದು ಇಲ್ಲಿಯ ತನಕ ಶಾಸಕರುಗಳ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗುತ್ತಿದೆಯೋ ಕಾದು ನೋಡಬೇಕಾಗಿದೆ.
ಜಿಲ್ಲಾಧಿಕಾರಿಗಳ ವರ್ಗಾವಣೆಗೆ ವಿರೋಧವೂ ಇದೆ :
ಹಾಲಿ ಜಿಲ್ಲಾಧಿಕಾರಿ ಅಕ್ರಂಪಾಷ ವರ್ಗಾವಣೆಗೆ ಕಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮನ್ನು ಗಣನೆಗೆ ತೆಗೆದುಕೊಳ್ಳದೆ ಜಿಲ್ಲಾ ಉಸ್ತುವಾರಿ ಸಚಿವರು ಒಂದಿಬ್ಬರ ಶಾಸಕರ ಮಾತು ಕೇಳಿ ವರ್ಗಾವಣೆ ಮಾಡಿಸುವುದು ಸರಿಯೇ ಎಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸತೊಡಗಿದ್ದಾರೆ ಎನ್ನಲಾಗಿದೆ.
ಕೋಟ್
ಜಿಲ್ಲಾಧಿಕಾರಿಗಳ ವರ್ಗಾವಣೆ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಪರ್ಯಾಯವಾಗಿ ಕೋಲಾರಕ್ಕೆ ತರುವ ಜಿಲ್ಲಾಧಿಕಾರಿಯ ವಿಷಯವು ನನ್ನ ಗಮನಕ್ಕೆ ಬಂದಿಲ್ಲ. ಯಾರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆಯೋ ಅವರನ್ನೇ ಕೇಳಬೇಕು. ಜಿಲ್ಲೆಯ ಕಾಂಗ್ರೇಸ್ ಶಾಸಕರನ್ನು ಕೇಳಿ ನಾನು ಎಂ.ಎಲ್.ಸಿ. ನನ್ನ ಗಮನಕ್ಕೆ ಯಾವ ವಿಷಯವೂ ಬಂದಿಲ್ಲ.
-ಎಂ.ಎಲ್.ಅನಿಲ್‌ಕುಮಾರ್, ವಿಧಾನಪರಿಷತ್ತು ಸದಸ್ಯರು.
ಚಿತ್ರ ೧೫ ಕೆ.ಎಲ್.ಆರ್. ೦೨ : ಕೋಲಾರ ಜಿಲ್ಲಾಧಿಕಾರಿ ಕಛೇರಿ
ಚಿತ್ರ ೧೫ ಕೆ.ಎಲ್.ಆರ್. ೦೨ : ಎಂ.ಎಲ್.ಅನಿಲ್‌ಕುಮಾರ್, ವಿಧಾನಪರಿಷತ್ತು ಸದಸ್ಯರು. ರವರ ಭಾವಚಿತ್ರ