ಕೋಮುಲ್ ಮತ್ತು ಡಿಸಿಸಿ ಬ್ಯಾಂಕ್ ಹಗರಣಗಳ ಬಗ್ಗೆ ಶಾಸಕರ ಮಧ್ಯೆ ಬೀದಿ ರಂಪಾಟ / ರೈತರು ಸುಮ್ಮನಿದ್ದರೂ ಕಾಂಗ್ರೇಸ್ ಪಕ್ಷದ ಶಾಸಕರಿಂದಲೇ ಆರೋಪ ಪ್ರತ್ಯಾರೋಪ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಜಿಲ್ಲೆಯ ರೈತರ ಪಾಲಿಗೆ ಸಹಕಾರ ಸಂಸ್ಥೆಗಳಾದ ಕೋಮುಲ್ ಮತ್ತು ಡಿಸಿಸಿ ಬ್ಯಾಂಕ್ ಎರಡು ಕಣ್ಣುಗಳಿದ್ದಂತೆ. ಆದರೆ ಇತ್ತೀಚೆಗೆ ಈ ಎರಡೂ ಸಂಸ್ಥೆಗಳಲ್ಲಿ ಹಗರಣಗಳು ನಡೆದಿವೆ ಎಂದು ರೈತರಿಗಿಂತ ಹೆಚ್ಚಾಗಿ ಜನಪ್ರತಿನಿಧಿಗಳೇ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡು ಬೀದಿ ರಂಪಾಟಕ್ಕೆ ಇಳಿದಿದ್ದಾರೆ.

ವಿಶೇಷವೆಂದರೆ ಈ ಎರಡೂ ಸಂಸ್ಥೆಗಳಲ್ಲಿ ಹಗರಣಗಳು ನಡೆದಿವೆ ಎಂದು ಕಾಂಗ್ರೇಸ್ ಪಕ್ಷದಲ್ಲಿನ ಶಾಸಕರೇ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ವಿರೋಧ ಪಕ್ಷದ ಶಾಸಕರು ಹಾಗೂ ಆಯಾ ಪಕ್ಷಗಳ ಮುಖಂಡರುಗಳು ಮಾಡಬೇಕಾದ ಆರೋಪಗಳನ್ನು ಸ್ವಪಕ್ಷದ ಶಾಸಕರುಗಳೇ ಎರಡೂ ಸಂಸ್ಥೆಗಳಲ್ಲಿ ಹಗರಣಗಳು ನಡೆದಿವೆ, ತನಿಖೆಯಾಗಬೇಕೆಂದು ಬಹಿರಂಗವಾಗಿ ಪತ್ರಿಕೆಗಳಿಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಆರೋಪ ಪ್ರತ್ಯಾರೋಪಗಳ ನಡುವೆಯೂ ಎರಡೂ ಸಂಸ್ಥೆಗಳಿಗೆ ಚುನಾವಣೆ ನಡೆದು ನಿರ್ದೇಶಕರ ಆಯ್ಕೆಯೂ ಆಯಿತು. ಕೋಚಿಮುಲ್‌ಗೆ ಚುನಾವಣೆ ನಡೆದು ನಿರ್ದೇಶಕರು ಆಯ್ಕೆ ಆಗಿ ಅಧ್ಯಕ್ಷರು ಆಯ್ಕೆ ಆಗಿದ್ದಾರೆ. ಆದರೆ ಕೋಮುಲ್ ಅಧ್ಯಕ್ಷರಾಗಿ ಆಗಿರುವ ಶಾಸಕ ನಂಜೇಗೌಡರ ವಿರುದ್ಧ ಕಾಂಗ್ರೇಸ್‌ನ ಮತ್ತೊಬ್ಬ ಶಾಸಕ ಮತ್ತು ಕೋಮುಲ್ ನಿರ್ದೇಶಕರಾಗಿ ಆಯ್ಕೆ ಆಗಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಮುಲ್ ಚುನಾವಣೆ ನಡೆಯುವ ಮೊದಲಿನಿಂದಲೂ ನಂಜೇಗೌಡರ ವಿರುದ್ಧ ಆರೋಪಗಳನ್ನು ಮಾಡಿ, ಈ ಹಿಂದೆ ಇದ್ದ ಕೋಚಿಮುಲ್‌ನಲ್ಲಿ ಬಾರಿ ಹಗರಣ ನಡೆದಿದೆ ಎಂದು ವಿಧಾನಸೌಧದ ಅಧಿವೇಶನದಲ್ಲಿ ಚರ್ಚೆ ನಡೆಸಿ ತನಿಖೆಗೊಳಪಡಿಸಬೇಕೆಂದು ಒತ್ತಾಯಪಡಿಸಿದ್ದರು.

ಕೋಮುಲ್‌ಗೆ ಚುನಾವಣೆ ನಡೆದು ಇಬ್ಬರು ಶಾಸಕರು ನಿರ್ದೇಶಕರಾಗಿ ಆಯ್ಕೆ ಆದರು. ಕೋಮುಲ್ ಕುರ್ಚಿಗಾಗಿ ಕಸರತ್ತುಗಳನ್ನು ನಡೆಸಿದರು. ಆದರೆ ನಂಜೇಗೌಡ ೩ನೇ ಬಾರಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಆದರು. ಆದರೂ ಸಹ ಇವರ ಆರೋಪ ಪ್ರತ್ಯಾರೋಪಗಳು ನಿಂತಿಲ್ಲ. ಈಗಲೂ ಮುಂದುವರೆದಿವೆ.

ಎಸ್.ಎನ್.ನಾರಾಯಣಸ್ವಾಮಿ ನಂಜೇಗೌಡರನ್ನು ಜೈಲಿಗೆ ಕಳುಹಿಸುತ್ತೇನೆಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ಜೊತೆಗೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧವೂ ಎಸ್.ಎನ್.ಗುಡುಗಿದ್ದಾರೆ. ಕೊತ್ತೂರು ಮಂಜುನಾಥ್ ರವರು ಸಹ ಎಸ್.ಎನ್.ಕೌಂಟರ್ ನೀಡುತ್ತಾ ತನಿಖೆಗೆ ನಮ್ಮ ಸಹಕಾರವಿದೆ. ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿದ್ದೂ ಆಯಿತು. ಸಹಕಾರ ಸಚಿವರು ಉತ್ತರ ನೀಡಿದ್ದು ಆಯಿತು. ಆದರೆ ಸುಮ್ಮನೆ ಇರದೆ ಎಸ್.ಎನ್. ಆರೋಪಗಳನ್ನು ಮಾಡುತ್ತಿದ್ದಾರೆ. ಇವರ ವಿರುದ್ಧ ಹೈಕಮ್ಯಾಂಡ್‌ಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಕೊತ್ತೂರು ಮಂಜುನಾಥ್ ಎಸ್.ಎನ್.ಗೆ ನೀಡಿದ್ದಾರೆ.

ಡಿಸಿಸಿ ಬ್ಯಾಂಕ್‌ನಲ್ಲಿ ಬಾರಿ ಹಗರಣ ನಡೆದಿದೆ ಎಂದು ಕಾಂಗ್ರೇಸ್‌ನ ಸ್ವಪಕ್ಷೀಯರಿಂದಲೇ ಆರೋಪಗಳು ಕೇಳಿ ಬಂದಿದ್ದು, ಈಗಾಗಲೇ ಇದು ನ್ಯಾಯಾಲಯದ ಮೆಟ್ಟಿಲೇರಿ ನಂತರ ಚುನಾವಣೆಯೂ ನಡೆಯಿತು. ಬ್ಯಾಂಕಿನ ಹಗರಣದ ಬಗ್ಗೆ ಲೋಕಾಯುಕ್ತದಲ್ಲಿ ಕೇಸು ಬಾಕಿ ಇದೆ. ಆದರೆ ಚುನಾವಣೆ ನಡೆದು ನಿರ್ದೇಶಕರು ಆಯ್ಕೆ ಆಗಿದ್ದಾರೆ. ಇನ್ನು ೩ ಕ್ಷೇತ್ರಗಳ ಚುನಾವಣೆ ಫಲಿತಾಂಶ ಬಾಕಿ ಇದ್ದು, ಇದು ನ್ಯಾಯಾಲಯದಲ್ಲಿ ಪ್ರಕರಣ ಇದೆ. ಜು.೧೧ ರಂದು ೩ ಕ್ಷೇತ್ರಗಳ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಫಲಿತಾಂಶ ಹೊರಬಂದ ನಂತರ ಅಧ್ಯಕ್ಷರ ಚುನಾವಣೆ ನಿಗಧಿಯಾಗುತ್ತದೆ.

ಬಾಂಕಿನ ಮಾಜಿ ಅಧ್ಯಕ್ಷ ಗೋವಿಂದೇಗೌಡರ ವಿರುದ್ಧ ಕಾಂಗ್ರೇಸ್‌ನ ಘಟಬಂಧನ್ ಶಾಸಕರು ಮತ್ತು ಮುಖಂಡರೇ ತಿರುಗಿಬಿದ್ದು, ಬ್ಯಾಂಕಿನಲ್ಲಿ ಹಗರಣ ತನಿಖೆಯಾಗಬೇಕು ಎಂದು ಪಟ್ಟು ಹಿಡಿದಿದ್ದರು. ಈ ವಿಷಯದ ಬಗ್ಗೆ ವಿಧಾನಪರಿಷತ್ತಿನಲ್ಲಿ ಚರ್ಚೆಯೂ ಆಗಿತ್ತು. ಕೋರ್ಟಿನ ಆದೇಶದಂತೆ ಚುನಾವಣೆ ನಡೆದಿದೆ. ಅಧ್ಯಕ್ಷರ ಆಯ್ಕೆ ಮಾತ್ರ ಬಾಕಿ ಉಳಿದಿದೆ.

ರೈತರ ಸಹಕಾರಿ ಸಂಸ್ಥೆಗಳಾದ ಕೋಮುಲ್ ಮತ್ತು ಡಿಸಿಸಿ ಬ್ಯಾಂಕ್ ಸಂಸ್ಥೆಗಳಲ್ಲಿ ಹಗರಣ ನಡೆದಿದೆ ರೈತರು ಮಾಡಬೇಕಾದ ಆರೋಪಗಳ ಬದಲಾಗಿ ಶಾಸಕರು ಮತ್ತು ಮುಖಂಡರೇ ಮಾಡಲು ಹೊರಟಿದ್ದಾರೆ. ಕಾಂಗ್ರೇಸ್ ಪಕ್ಷದಲ್ಲಿನ ಭಿನ್ನಮತದಿಂದ ಎರಡು ಸಹಕಾರಿ ಸಂಸ್ಥೆಗಳನ್ನು ಬೀದಿಗೆ ತಂದು ನಿಲ್ಲಿಸಿದಂತೆ ಆಗಿದೆ.

ಚಿತ್ರ ೧೦ ಕೆ.ಎಲ್.ಆರ್. ೦೨ : ಎಸ್.ಎನ್.ನಾರಾಯಣಸ್ವಾಮಿ ಭಾವಚಿತ್ರ

ಚಿತ್ರ ೧೦ ಕೆ.ಎಲ್.ಆರ್. ೦೨ಎ : ಕೆ.ವೈ.ನಂಜೇಗೌಡರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net