

ಕೊಪ್ಪ: ತಾಲೂಕಿನ ಅದ್ದಡ ಗ್ರಾಮದ ಕೋಟೆಗುಡ್ಡಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ತೆರಳಿ ಭಾನುವಾರ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಕರ ಸಂಕ್ರಮಣ ನಂತರ ಬರುವ ಭಾನುವಾರಂದು ಅದ್ದಡ, ಕೊಪ್ಪ, ಬೊಮ್ಮಲಾಪುರ, ಕುಂಚೂರು, ನಾರ್ವೆ, ಹರಿಹರಪುರ ಮೊದಲಾದ ಗ್ರಾಮದಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಕೋಟೆಗುಡ್ಡದಲ್ಲಿರುವ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವುದಾಗಿ ಈ ಹಿಂದೆ ಸ್ಥಳೀಯರು ನಿರ್ಧರಿಸಿದ್ದರು. ಅದರಂತೆ ಈ ಬಾರಿ ಸುಮಾರು ಮೂರು ಕಿ.ಮೀ ಗುಡ್ಡ ಹತ್ತಿ ಭಕ್ತರು ಪೂಜೆ ಸಲ್ಲಿಸಿದರು. ಸ್ಥಳೀಯರಾದ ಶಿವಶಂಕರ್ ಭಟ್ ಇವರು ಪೂಜೆ, ದೇವತಾ ಕಾರ್ಯ ನಡೆಸಿದರು.
ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಕೋಟೆಗುಡ್ಡವನ್ನು ಕಾಲ್ನಡಿಗೆಯಲ್ಲಿ ತೆರಳಿ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದರು. ನಂತರದಲ್ಲಿ ಕೆಲ ವರ್ಷಗಳು ಹನುಮ ಜಯಂತಿ ಆಚರಿಸಲಾಗಿತ್ತು. ಈಗ ಕೋಟೆಗುಡ್ಡ ಭಕ್ತಾಂಜನೇಯ ಸೇವಾ ಸಮಿತಿಯಿಂದ ಕೋಟೆಗುಡ್ಡಕ್ಕೆ ತೆರಳಿ ಪೂಜಾ ಕಾರ್ಯ ಮಾಡಲು ನಿರ್ಧರಿಸಿ, ಪೂಜೆ ಸಲ್ಲಿಸಲಾಯಿತು. ಸಮಿತಿ ಅಧ್ಯಕ್ಷ ಪ್ರಶಾಂತ್ ಕುಮಾರ್, ನಾಗರಾಜ್, ಆಶೋಕ್ ಭಟ್, ಭರತ್ ಮುಂತಾದವರಿದ್ದರು.