ಕೋಟೆ ತಹಸೀಲ್ದಾರ್‌ಗೆ ರೈತರ ಮುತ್ತಿಗೆ

23HDK1
Published on

ಎಚ್.ಡಿ.ಕೋಟೆ: ಸಾಗುವಳಿ ಚೀಟಿ ವಿತರಣೆ ಮಾಡುವವರೆಗೂ ನಿಮ್ಮನ್ನು ಬೇರೆಡೆಗೆ ಹೋಗಲು ಬಿಡುವುದಿಲ್ಲ ಎಂದು ತಾಲೂಕಿನ ವಿವಿಧ ಗ್ರಾಮದ ನೂರಾರು ರೈತರು ಶುಕ್ರವಾರ ತಹಸೀಲ್ದಾರ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ತಹಸೀಲ್ದಾರ್ ಪಿ.ಎಸ್.ಮಹೇಶ್ ಬಡ್ತಿ ಹೊಂದಿ ಬೇರೆಡೆಗೆ ವರ್ಗಾವಣೆ ಆಗಿ ಮತ್ತೊಬ್ಬರಿಗೆ ಅಧಿಕಾರ ಹಸ್ತಾಂತರ ಮಾಡುತ್ತಿದ್ದಾರೆ ಎಂಬ ವಿಚಾರ ತಿಳಿದ ರೈತರು, ಪಟ್ಟಣದ ತಾಲೂಕು ಆಡಳಿತ ಭವನಕ್ಕೆ ಆಗಮಿಸಿ ತಹಸೀಲ್ದಾರ್‌ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ನಾವು 30-40 ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದೇವೆ. ಭೂಮಿಗೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಆದರೆ ನಮಗೆ ಇದುವರೆಗೂ ಸಾಗುವಳಿ ಚೀಟಿ ದೊರಕ್ಕಿಲ್ಲ. ಅಕ್ರಮ-ಸಕ್ರಮ ಸಮಿತಿ ಸಭೆ ನಡೆದು ಆರು ತಿಂಗಳು ಕಳೆದರೂ ಸಾಗುವಳಿ ಚೀಟಿ ನೀಡಲು ವಿಳಂಬ ಮಾಡಲಾಗುತ್ತಿದೆ. ಕಳೆದ ವಾರ ಶಾಸಕರು ಸಭೆ ನಡೆಸಿ ಜೂ.20ರಂದು ತಾಲೂಕಿನ 451 ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು ಎಂದು ತಿಳಿಸಿದ್ದರೂ ನೀವು ಕ್ರಮವಹಿಸಿಲ್ಲ. ಈಗ ನೋಡಿದರೆ ಇಲ್ಲಿಂದ ಬೇರೆಡೆಗೆ ಹೋಗುತ್ತಿದ್ದೀರಾ? ನಮಗೆ ಸಾಗುವಳಿ ಚೀಟಿ ನೀಡುವವರೆಗೂ ಇಲ್ಲಿಂದ ಹೋಗಲು ಬಿಡುವುದಿಲ್ಲ. ನೀವು ಸಾಗುವಳಿ ಚೀಟಿ ನೀಡಿದ ನಂತರವೇ ಇಲ್ಲಿಂದ ತೆರಳಬೇಕು ಎಂದು ಪಟ್ಟುಹಿಡಿದರು.

ತಹಸೀಲ್ದಾರ್ ಮಹೇಶ್ ನಂತರ ಮಾತನಾಡಿ, ಶಾಸಕರ ಸೂಚನೆಯಂತೆ ಸಮಿತಿಯಲ್ಲಿ ನಿರ್ಣಯ ಆಗಿರುವ ಎಲ್ಲ ಕಡತಗಳನ್ನು ಪರಿಶೀಲಿಸಲಾಗಿದೆ. ಈಗಾಗಲೇ ಹಲವಾರು ರೈತರಿಂದ ಕಿಮ್ಮತ್ತು ಹಣ ಕಟ್ಟಿಸಿಕೊಂಡು ಸಾಗುವಳಿ ಪತ್ರ ಬರೆದು ಇಟ್ಟುಕೊಂಡಿದ್ದೇವೆ. ಇನ್ನೂ ಕೆಲವು ರೈತರ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದು, ಆ ಕೆಲಸ ಮುಗಿದ ನಂತರ ಕಿಮ್ಮತ್ತು ಹಣ ಕಟ್ಟಿಸಿಕೊಂಡು ಸಾಗುವಳಿ ಪತ್ರ ವಿತರಣೆ ಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೆ ಸಮಾಧಾನ ಆಗದ ಮುಖಂಡರು, ಶಾಸಕರು ನೀಡಿರುವ ಸೂಚನೆಯಂತೆ 451 ಜನ ರೈತರಿಂದ ಕಿಮ್ಮತ್ತು ಹಣ ಕಟ್ಟಿಸಿಕೊಂಡು ಎಲ್ಲರಿಗೂ ಸಾಗುವಳಿ ಚೀಟಿ ವಿತರಿಸಬೇಕು. ಇಲ್ಲದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಗೆ ನಿರ್ಧಾರ: ಸಂಜೆಯೊಳಗೆ 451 ರೈತರ ಬಳಿ ಕಿಮ್ಮತ್ತು ಹಣ ಕಟ್ಟಿಸಿಕೊಳ್ಳದಿದ್ದರೆ ಸೋಮವಾರ ಬೆಳಗ್ಗೆ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲು ರೈತ ಮುಖಂಡರು ತೀರ್ಮಾನಿಸಿದರು.

ದಸಂಸ ತಾಲೂಕು ಸಂಚಾಲಕ ಸಣ್ಣಕುಮಾರ್, ಮಟಕೆರೆ ಕೃಷ್ಣ, ಜಿ.ಜಿ.ಕಾಲನಿ ರವಿ, ಮಾದಪುರ ಕುಮಾರಸ್ವಾಮಿ, ಶಿವಯ್ಯ, ಕಾಳಪ್ಪಾಜಿ, ಎಡತೊರೆ ಮಹೇಶ್ ಸೇರಿದಂತೆ ನೂರಾರು ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net