ಕೋಟಿ ಮಂದಿಗೆ ತರಬೇತಿ ನೀಡುವ ಗುರಿ

klr trying
ಕೋಲಾರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಇಂಟರ್​ಶಿಪ್​ ಕಾರ್ಯಕ್ರಮಗಳ ಅರಿವು ಕಾರ್ಯಾಗಾರಕ್ಕೆ ಮಳವಳ್ಳಿಯ ಸ್ಟಾರ್ಕ್​ ತರಬೇತಿ ಕೇಂದ್ರದ ಅಧಿಕಾರಿ ಹಾಗೂ ವಿಭಾಗೀಯ ಜಂಟಿ ನಿರ್ದೇಶಕ ಬಿ.ಎಲ್​.ಚಂದ್ರಶೇಖರ್​ ಚಾಲನೆ ನೀಡಿದರು. ಶ್ರೀನಿವಾಸ್​, ಮಂಜುನಾಥ್​, ಗೋಪಾಲ್​ ಇದ್ದರು.
Published on

ಕೋಲಾರ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಇಂಟರ್​ಶಿಪ್​ ಯೋಜನೆ ಜಾರಿಗೆ ತಂದಿದ್ದು, ಇದರಡಿ 5 ವರ್ಷದಲ್ಲಿ 1 ಕೋಟಿ ಯುವಕರಿಗೆ ಕೌಶಲ ತರಬೇತಿ ನೀಡುವ ಗುರಿ ಇದೆ ಎಂದು ಮಳವಳ್ಳಿ ಸ್ಟಾರ್ಕ್​ ತರಬೇತಿ ಕೇಂದ್ರದ ಅಧಿಕಾರಿ ಹಾಗೂ ವಿಭಾಗೀಯ ಜಂಟಿ ನಿರ್ದೇಶಕ ಬಿ.ಎಚ್​.ಚಂದ್ರಶೇಕರ್​ ತಿಳಿಸಿದರು.

ಜಿಲ್ಲಾಡಳಿತ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ತರಬೇತುದಾರರಿಗೆ ಹಾಗೂ ಉದ್ಯಮಿಗಳಿಗೆ ಪ್ರಧಾನಮಂತ್ರಿ ಇಂಟರ್​ಶಿಪ್​ ಕಾರ್ಯಕ್ರಮಗಳ ಅರಿವು ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ದೇಶದ ಯುವಶಕ್ತಿಯನ್ನು ಕೌಶಲಯುತ ಸ್ವಾವಲಂಬಿ ಶಕ್ತಿಯನ್ನಾಗಿ ಪರಿವರ್ತಿಸುವ ಉದ್ದೇಶದಿಂದಲೇ ಯೋಜನೆ ಜಾರಿಗೆ ತರಲಾಗಿದೆ. ಜಿಲ್ಲೆಯ ನರಸಾಪುರ, ವೇಮಗಲ್​, ಮಾಲೂರು ಪ್ರದೇಶದಲ್ಲಿ ಬೃಹತ್​ ಕೈಗಾರಿಕೆಗಳು ಆರಂಭಗೊಂಡಿವೆ. ಆ ಕಂಪನಿಗಳಿಗೆ ಅಗತ್ಯ ಕೌಶಲ್ಯಭರಿತ ಮಾನವ ಸಂಪನ್ಮೂಲ ಕೊರತೆ ಇದೆ ಎಂದರು.

ಸ್ಥಳಿಯ ಯುವಕರಿಗೆ ಆ ಕಂಪನಿಗಳಿಗೆ ಅಗತ್ಯ ಕೌಶಲ್ಯವನ್ನು ಕಲಿಸಿಕೊಡುವ ಮೂಲಕ ಅವರಿಗೆ ಅಗತ್ಯ ಮಾನವ ಸಂಪನ್ಮೂಲ ಒದಗಿಸುವುದರ ಜತೆಗೆ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾಗಲಿದೆ ಎಂದು ತಿಳಿಸಿದರು.

ವಿಭಾಗೀಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ವೈಜಗೊಂಡ ಮಾತನಾಡಿ, ತರಬೇತಿ ಅವಧಿಯಲ್ಲಿ ಒಂದು ವರ್ಷ ಕೇಂದ್ರ ಸರ್ಕಾರ 4,500 ರೂ. ಹಾಗೂ ಸಂಬಂಧಿಸಿದ ಕಂಪನಿಗಳು 500 ರೂ. ನೀಡಲಿದೆ. ಇದರಿಂದ ಕೈಗಾರಿಕೆಗಳಿಗೆ ತನಗೆ ಅಗತ್ಯವಾದ ಕೌಶಲ್ಯವನ್ನು ಹೊಂದಿದ ಯುವಶಕ್ತಿ ದೊರೆಯುವಂತಾಗುವುದರಿಂದ ಸ್ಥಳಿಯರಿಗೆ ಉದ್ಯೋಗ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.

ನಗರದ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಗೋಪಾಲ್​ ಮಾತನಾಡಿ,ಯುವಶಕ್ತಿಯನ್ನು ದೇಶದ ಸಮಗ್ರ ಅಭಿವೃದ್ಧಿಯ ಹಾದಿಯಲ್ಲಿ ಬಳಸಿಕೊಳ್ಳುವ ಪ್ರಯತ್ನವಾಗಲಿದೆ, ಇದರಿಂದ ಆರ್ಥಿಕಾಭಿವೃದ್ಧಿಗೂ ಅವಕಾಶವಿದೆ ಎಂದರು.

ಮಾಲೂರು ಹಾಗೂ ಕೆಜಿಎಫ್​ ತರಬೇತಿ ಸಂಸ್ಥೆ ಪ್ರಾಂಶುಪಾಲ ವೆಂಕಟೇಶ್​, ದೇವರಾಯಸಮುದ್ರ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಶ್ರೀನಿವಾಸ್​, ರೋಣೂರು ಐಟಿಐ ಪ್ರಾಂಶುಪಾಲ ವೆಂಕಟಾಚಲಪತಿ, ದಳಸನೂರು ಐಟಿಐ ಪ್ರಾಂಶುಪಾಲ ರಮೇಶ್​, ಮುಳಬಾಗಿಲು ಐಟಿಐ ಪ್ರಾಂಶುಪಾಲ ಎಂ.ಶಿವಾನಂದ್​, ನಗರದ ಐಟಿಐನ ಅಧಿಕಾರಿಗಳಾದ ಶಿವಕುಮಾರ್​, ಚಿನ್ನಪ್ಪ, ವಾಣಿಶ್ರೀ, ಉಮಾದೇವಿ, ಪುಷ್ಪಾ, ಮಂಜುನಾಥ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net