ಕೋಕೋ ಬೆಳೆ ಲಾಭದಾಯಕ

23sri-1 coca
ಶೃಂಗೇರಿಯಲ್ಲಿ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಿಂದ ಆಯೋಜಿಸಲಾದ ವೈಜ್ಞಾನಿಕ ಕೋಕೋ ಕೃಷಿ-ಪಶ್ಚಿಮಘಟ್ಟಗಳ ಸುಸ್ಥಿರ ಪರಿಸರಕ್ಕಾಗಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಡಾ. ಮಹಾಂತೇಶ್, ಶ್ರೀಕೃಷ್ಣ, ಡಾ. ಶಿವಕುಮಾರ್ ಇದ್ದರು.
Published on

ಶೃಂಗೇರಿ: ಕೋಕೋ ಪ್ರಮುಖ ವಾಣಿಜ್ಯ ಬೆಳೆ. ಅಡಕೆ, ತೆಂಗಿನ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಭಾರತದಲ್ಲಿ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಕೋಕೋ ಬೆಳೆಸಲಾಗುತ್ತಿದ್ದು ತೇವಾಂಶವುಳ್ಳ ಉಷ್ಣವಲಯದ ಹವಾಮಾನದಲ್ಲಿ ಬೆಳೆಸಲಾಗುತ್ತದೆ ಎಂದು ಬೆಳ್ತಂಗಡಿ ಪ್ರಗತಿಪರ ಕೃಷಿಕ ಪ್ರಭಾಕರ್‌ಮಯ್ಯ ಸೂರ್ಯ ತಿಳಿಸಿದರು.

ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ವೈಜ್ಞಾನಿಕ ಕೋಕೋ ಕೃಷಿ-ಪಶ್ಚಿಮಘಟ್ಟಗಳ ಸುಸ್ಥಿರ ಪರಿಸರಕ್ಕಾಗಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಕೋಕೋ ಬೆಳೆಯ ಕುರಿತು ಮಾಹಿತಿ ನೀಡಿದರು. ಕೋಕೋ ಕೃಷಿ ಮಾಡುವ ಮುನ್ನ ಉತ್ತಮ ಇಳುವರಿ ನೀಡುವ ಮತ್ತು ರೋಗನಿರೋಧಕ ಶಕ್ತಿಯಿರುವ ಸಸಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಬೆಳೆಗೆ ನಿಯಮಿತವಾಗಿ ನೀರುಣಿಸುವುದು ಅವಶ್ಯಕ. ಲವತ್ತಾದ ಮಣ್ಣನ್ನು ಹೊಂದಿರುವ, ನೀರಿನ ಸೌಲಭ್ಯ ಇರುವಲ್ಲಿ ಸಸಿಗಳನ್ನು ನೆಡಬೇಕು. ಅದರ ಆರಂಭಿಕ ಬೆಳವಣಿಗೆ ಹಂತದಲ್ಲಿ ನೆರಳು ಹಾಗೂ ನೀರಿನ ಅವಶ್ಯಕತೆ ಇರುತ್ತದೆ. ಕೋಕೋ ಪರ್ಯಾಯ ಬೆಳೆಯಾಗಿ ಬೆಳೆಸುವುದರಿಂದ ಆರ್ಥಿಕವಾಗಿ ಸದೃಢರಾಗಬಹುದು ಎಂದರು.

ಪ್ರಗತಿಪರ ಕೃಷಿಕ ಕಲ್ಕುಳ್ಳಿ ವಿಠಲ ಹೆಗಡೆ ಮಾತನಾಡಿ, ಕೋಕೋ ಪರಿಸರ ಸ್ನೇಹಿ ಬೆಳೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ನೀಡುವ ಕೋಕೋ ಬೆಳೆ ಮಲೆನಾಡಿನಲ್ಲಿ ಉಪಬೆಳೆಯಾಗಿ ಬೆಳೆಸಬಹುದು. ಅಡಕೆ ಬೆಳೆಗಳಿಗೆ ತೊಂದರೆ ನೀಡದಂತೆ ಬೆಳೆಯುವ ಕೋಕೋ ಬೆಳೆಗೆ ರೋಗ ಬರುವುದು ಅತ್ಯಂತ ಕಡಿಮೆ. ಕೇಕ್, ಚಾಕಲೇಟ್ ತಯಾರಿಸಲು ಇದನ್ನು ಬೆಳೆಸಲಾಗುತ್ತಿದ್ದು ಬೆಳೆಗೆ ಹೆಚ್ಚಿನ ಬೇಡಿಕೆ ಇದೆ ಎಂದರು.

ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕೃಷ್ಣ ಮಾತನಾಡಿ, ಯಾವುದೇ ಬೆಳೆಗೆ ಮಣ್ಣು ಪರೀಕ್ಷೆಯ ಅವಶ್ಯಕತೆ ಇದೆ. ಮಣ್ಣು ಪ್ರಕೃತಿದತ್ತವಾದ ನಿಸರ್ಗದ ಅಮೂಲ್ಯ ಸಂಪತ್ತು. ಒಂದೇ ಕ್ಷೇತ್ರದಲ್ಲಿ ಬೆಳೆಗಳನ್ನು ನಿರಂತರವಾಗಿ ಬೆಳೆಯುವುದರಿಂದ ಮಣ್ಣಿನ ಪೋಷಕಾಂಶ ಕ್ಷೀಣಿಸುತ್ತದೆ. ಲವತ್ತಾದ ಮಣ್ಣು ಇದ್ದರೆ ತೋಟಗಾರಿಕಾ ಬೆಳೆಗಳಿಂದ ಹೆಚ್ಚು ಇಳುವರಿ ನಿರೀಕ್ಷಿಸಬಹುದು ಎಂದರು. ಕೋಕೋ ಬೆಳೆಯಲ್ಲಿ ಮಾರುಕಟ್ಟೆ ಮತ್ತು ರ್ತು ಕುರಿತು ಮೆಣಸೆ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಾತನಾಡಿದರು. ಪ್ರಗತಿಪರ ರೈತರಾದ ಹೊನ್ನವಳ್ಳಿ ರಮೇಶ್, ಯೋಜನಾ ಸಹಾಯಕರಾದ ಬಿ.ಎಸ್.ಮನೋಜ್‌ರಾವ್ ಮೋರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net