ಕೊಹಳ ಸಮಸ್ಯೆಗೆ ಸಿಗುವುದೇ ಮುಕ್ತಿ?

Published on

ಎಚ್.ಡಿ.ಕೋಟೆ: ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮುಸುಕಿನ ಗುದ್ದಾಟದಿಂದ ಮೂವತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಂಚನಹಳ್ಳಿ ಹಾಗೂ ಕೊಹಳ ರೈತರ ಭೂ ಸಮಸ್ಯೆಯನ್ನು ಕಂದಾಯ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯದಿಂದ ಬಗೆಹರಿಸುವ ಆಶಾಭಾವನೆ ಎಲ್ಲರಲ್ಲೂ ಮನೆಮಾಡಿದೆ.


ನ.19 ಮತ್ತು 20ರಂದು ತಾಲೂಕಿನ ಗಡಿಭಾಗದ ಎನ್. ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ, ಕೆಂಚನಹಳ್ಳಿ, ಭೀಮನಕೊಲ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಯಿಂದ ಸಾವಿರಾರು ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಸಚಿವರು ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರೈತರ ಜಟಿಲ ಸಮಸ್ಯೆಗಳಿಗೆ ಗ್ರಾಮ ವಾಸ್ತವ್ಯದ ಮೂಲಕ ಮುಕ್ತಿ ನೀಡಲಿದ್ದಾರೆ.


ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನಲ್ಲಿರುವ ಆದಿವಾಸಿಗಳು ಸೇರಿದಂತೆ ಹಲವಾರು ರೈತರು ಜಮೀನು ಹಾಗೂ ವಾಸದ ಮನೆಗಳ ದಾಖಲೆಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗದೆ ಮೂವತ್ತು ವರ್ಷಗಳಿಂದ ಪರದಾಡುತ್ತಿದ್ದಾರೆ.


ಜಿಲ್ಲೆಯ ಜೀವನದಿ ಕಬಿನಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ ಕೆಂಚನಹಳ್ಳಿ ಗ್ರಾಮದ ನೂರಾರು ರೈತರು ಪುನರ್ವಸತಿ ನಂತರ ಭೂಮಿ ಸಿಗದೆ ಅತಂತ್ರರಾಗಿದ್ದಾರೆ. ಕೆಂಚನಹಳ್ಳಿ ಸ.ನಂ.ನಲ್ಲಿ ಕಬಿನಿ ಜಲಾಶಯಕ್ಕೆ ಭೂಮಿ ಕಳೆದು ಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಕಂದಾಯ ಇಲಾಖೆ ಅರಣ್ಯ ಇಲಾಖೆಯಿಂದ 1070 ಎಕರೆ ಭೂಮಿಯನ್ನು ದಾಖಲೆ ಪ್ರಕಾರ ಹಸ್ತಾಂತರ ಮಾಡಿಕೊಂಡು ರೈತರಿಗೆ ಸಾಗುವಳಿ ನೀಡಿತು. ಅದರೆ, ವಾಸ್ತವವಾಗಿ ಕೇವಲ 740 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ನೀಡಿ 330 ಎಕರೆ ಜಮೀನು ನೀಡದೆ ಕಂದಾಯ ಮತ್ತು ಅರಣ್ಯ ಇಲಾಖೆಯ ಗುದ್ದಾಟದಿಂದ ಭೂಮಿ ಕಳೆದುಕೊಂಡ ರೈತರು ಅರಣ್ಯ ಇಲಾಖೆ ವಿರುದ್ಧ ಹೋರಾಟ ಮಾಡಿ ಜೈಲು ಸೇರಿದ ಪ್ರಕರಣ ನಡೆದರೂ ಭೂಮಿ ಸಿಗದೆ ಅತಂತ್ರರಾಗಿದ್ದಾರೆ. ನಿರಂತರ ಹೋರಾಟದ ಫಲವಾಗಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡಿದ ನಂತರ ಈಗ ಒಂದು ಹಂತಕ್ಕೆ ಬಂದಿದ್ದು, ಕಂದಾಯ ಸಚಿವರ ಗ್ರಾಮ ವಾಸ್ತವ್ಯದ ಮೂಲಕ ಹಲವು ವರ್ಷಗಳ ಸಮಸ್ಯೆಗೆ ಮುಕ್ತಿ ಸಿಕ್ಕಿ ನಿರಾಶ್ರಿತರ ಮುಖದಲ್ಲಿ ನಗು ಕಾಣಲಿದೆ.
ಅದೇ ರೀತಿ ಕೊಹಳ ಗ್ರಾಮದ ರೈತರ ಸಮಸ್ಯೆ ಕೂಡ ಇದೇ ಆಗಿದ್ದು, ಕಂದಾಯ ಇಲಾಖೆಗೆ ಸೇರಿದ 364 ಎಕರೆ ಜಮೀನಿಗೆ ರೈತರು ಸಾಗುವಳಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರಣ್ಯ ಇಲಾಖೆ ಈ ಜಾಗ ನಮಗೆ ಸೇರಿದ್ದು ಎಂದು ತಡೆ ಒಡ್ಡಿದ್ದು, ಈ ವಿಚಾರ ಕೂಡ ಚರ್ಚೆ ಆಗಲಿದೆ. ಈ ಸಮಸ್ಯೆ ಬಗೆಹರಿದರೆ ನೂರಾರು ರೈತರು ನಿಟ್ಟುಸಿರು ಬಿಡಲಿದ್ದಾರೆ.

ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಸಚಿವರಾಗಿದ್ದ ಸಂದರ್ಭದಲ್ಲಿ ಹೊಸಹಳ್ಳಿ ಗ್ರಾಮದ ಶಾಲೆಯಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮಿನಿ ಸಚಿವ ಸಂಪುಟ ನಡೆಸಿ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿತ್ತು. ಈಗ ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆಯಲ್ಲಿ ಇದೇ ಹೊಸಹಳ್ಳಿ ಶಾಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಯಾವ ರೀತಿ ಅನುಕೂಲವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net