

ಕಡೂರು: ರೈತರೊಂದಿಗೆ ಚರ್ಚಿಸಿ ಪ್ರತಿ ಒಂದು ಅಡಿ ಕೊಳವೆ ಬಾವಿ ಕೊರೆಸಲು 105 ರೂ.ಗೆ ಏರಿಕೆ ಮಾಡಲಾಗಿದೆ. ಜಿಲ್ಲೆಯ ರೈತರು ಸ್ಪಂದಿಸಬೇಕಿದೆ ಎಂದು ಬೋರ್‌ವೆಲ್ ಲಾರಿಗಳ ಮಾಲೀಕರ ಮತ್ತು ಏಜೆಂಟರ ಸಂಘದ ಅಧ್ಯಕ್ಷ ರಾಜಣ್ಣ ತಿಳಿಸಿದರು.
ಪಟ್ಟಣದ ರೋಟರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಂತಿಮವಾಗಿ ರೈತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡಿರುವ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಬಹುತೇಕ ತಮಿಳುನಾಡಿನ ಬೋರ್‌ವೆಲ್ ಲಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಯಂತ್ರೋಪಕರಣ, ಡೀಸೆಲ್ ದರ, ಕಾರ್ಮಿಕರ ಸಮಸ್ಯೆಗಳಿಂದ ಮಾಲೀಕರಿಗೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದರವನ್ನು ಹೆಚ್ಚಿಸುವುದು ಅನಿವಾರ್ಯ. ಹೀಗಾಗಿ ತರೀಕೆರೆ, ಅಜ್ಜಂಪುರ, ಕಡೂರು, ಬೀರೂರು ಹಾಗೂ ಚಿಕ್ಕಮಗಳೂರಿನ ಎಲ್ಲ ಬೋರ್‌ವೆಲ್ ಲಾರಿ ಮಾಲೀಕರು, ಏಜೆಂಟರು ಮತ್ತು ರೈತರ ಸಮ್ಮುಖದಲ್ಲಿ ಸಮಸ್ಯೆ ಬಗ್ಗೆ ಮಾಹಿತಿ ನೀಡಿ ರೈತರ ಮನವೊಲಿಸಿ 105 ರೂ.ಗೆ ಒಂದು ಅಡಿ ಕೊರೆಯಲು ತೀರ್ಮಾನಿಸಲಾಗಿದ್ದು ಎಲ್ಲರೂ ಸರ್ವಾನುಮತದಿಂದ ಬೆಂಬಲ ಸೂಚಿಸಿದ್ದಾರೆ ಎಂದರು.
ಬೋರ್‌ವೆಲ್ ಮಾಲೀಕರ ಸಂಘದ ಪದಾಧಿಕಾರಿಗಳಾದ ವಡೇರಹಳ್ಳಿ ಅಶೋಕ್, ಚೀರನಹಳ್ಳಿ ಹರೀಶ್, ಅಜ್ಜಂಪುರ ಮಲ್ಲಿಕಾರ್ಜುನ್, ರಂಗೇನಹಳ್ಳಿ ದೇವರಾಜ್, ಮಧು, ಹೊಗರೆಹಳ್ಳಿ ನವೀನ್, ರೈತರಾದ ಮಂಜುನಾಥ್ ಸಾದರಹಳ್ಳಿ, ಸತೀಶ್, ಮಧು ಮತ್ತಿತರರಿದ್ದರು.