

ಕೋಲಾರ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಕೊಲೆಗೆ ಯತ್ನಿಸಲಾಗಿತ್ತು ಎಂಬುದು ಬಿಜೆಪಿಯವರ ಆರೋಪವಷ್ಟೇ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ನಗರದ ಶಾಸಕರ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊಲೆ ಮಾಡುವುದು ಎಂದರೆ ಏನರ್ಥ?, ಸುವರ್ಣ ಸೌಧದಿಂದ ಪೊಲೀಸರು ರವಿ ಅವರನ್ನು ಹೊರಗೆ ಕರೆದುಕೊಂಡು ಬಂದಿದ್ದೇ ಒಳ್ಳೆಯದಾಯಿತು ಎಂದರು.
ಶಾಸಕ ಮುನಿರತ್ನ ಮೇಲೆ ಯಾರೋ ಪುಂಡರು ಮೊಟ್ಟೆ ಎಸೆದಿರಬಹುದು. ಇಲ್ಲ, ಅವರೇ ಹೇಳಿ ಮೊಟ್ಟೆ ಹೊಡೆಸಿಕೊಂಡಿರಬಹುದು. ಆಕಸ್ಮಾತ್ ಉದ್ದೇಶಪೂರ್ವಕವಾಗಿ ಎಸೆದಿದ್ದರೆ ಅದು ತಪ್ಪು. ಅವರೊಬ್ಬ ಶಾಸಕ. ಆ ರೀತಿ ಮಾಡಬಾರದು ಎಂದರು.
30 ಕೋಟಿ ರೂ. ಅನುದಾನ: ಕ್ಷೇತ್ರದಲ್ಲಿನ ರಸ್ತೆಗಳ ಅಭಿವೃದ್ಧಿಗೆಂದು 30 ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಕ್ಷೇತ್ರದಲ್ಲಿ ಬಹುತೇಕ ಕಾಮಗಾರಿಗಳಿಗೆ ಟೆಂಡರ್ ಆಗಿದೆ. ಹಿಂದೆ ಪಿಎಂಜಿವೈಎಸ್, ಸಿಎಂಜಿವೈಎಸ್ ಯೋಜನೆ ಇದ್ದದ್ದು ಈಗ ಪ್ರಗತಿ ಪಥವಾಗಿದೆ ಎಂದು ಶಾಸಕರು ತಿಳಿಸಿದರು.
ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ಎಐಸಿಸಿ ಸಭೆ ನಡೆದು ನೂರು ವರ್ಷಗಳಾಗಿದ್ದು, ಆ ನೆನಪಿನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ನಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಶುಕ್ರವಾರದ ಕಾರ್ಯಕ್ರಮಗಳಲ್ಲಿ ನಾನೂ ಭಾಗವಹಿಸುತ್ತೇನೆ ಎಂದು ತಿಳಿಸಿದರು.
* ಪ್ರಕರಣದ ತನಿಖೆಗೆ ಸಹಕಾರ
ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಮೇಲ್ಮನವಿ ವಜಾ ಸಂಬಂಧ ಪ್ರತಿಕ್ರಿಯಿಸಿ, 2018ರಲ್ಲಿ ನನ್ನ ಮೇಲೆ ಪ್ರಕರಣ ದಾಖಲಾಗಿತ್ತು. ಅದರ ಮೇಲೆ ನಾನು ತಡೆಯಾಜ್ಞೆ ತಂದು, ವಜಾ ಮಾಡಲು ಕೋರಿದ್ದೆ. ಅದನ್ನು ಕೋರ್ಟ್ ತಳ್ಳಿ ಹಾಕಿ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದೆ. ಯಾರೇ ವಿಚಾರಣೆಗೆ ಕರೆದರೂ ಸಹಕರಿಸುತ್ತೇನೆ ಎಂದು ಶಾಸಕರು ತಿಳಿಸಿದರು.