ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

court
Published on

ಬೆಳಗಾವಿ/ಚಿಕ್ಕೋಡಿ: ಪತ್ನಿಯೊಂದಿಗೆ ಸಲುಗೆಯಿಂದ ವರ್ತಿಸಿದ್ದವನ ಕೊಲೆಗೈದ ಆರೋಪ ಸಾಬೀತಾಗಿದ್ದರಿಂದ ಅಪರಾಧಿಗೆ 15 ಸಾವಿರ ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಚಿಕ್ಕೋಡಿಯ ಅಧೀನ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ.

ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದ ನಿವಾಸಿ ರವಿಕುಮಾರ ಶೆಟ್ಟೆಪ್ಪ ದೊಡಮನಿ ಶಿಕ್ಷೆಗೆ ಗುರಿಯಾದವ. ರವಿ ತನ್ನ ಪತ್ನಿ ರೇಣುಕಾ(ಪುಟ್ಟವ್ವ) ಜತೆಗೆ ಸಲುಗೆಯಿಂದಿದ್ದ ತನ್ನದೇ ಊರಿನ ಕುಮಾರ ಸರಿಕರ ಎಂಬಾತನನ್ನು 2017ರ ಆ.10 ರಂದು ಕುಡಗೋಲಿನಿಂದ ಕೊಚ್ಚಿ ಕೊಲೆಗೈದಿದ್ದ. ಈ ಬಗ್ಗೆ ಮೃತನ ತಂದೆ ಮಾರುತಿ ಸರಿಕರ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಿಪಿಐ ಶೇಖರಪ್ಪ ಎಚ್., ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದಿ ನ್ಯಾಯಾಧೀಶ ಎಸ್.ಎಲ್.ಚವ್ಹಾಣ ಅವರು ಆರೋಪ ಸಾಬೀತಾಗಿದ್ದರಿಂದ ರವಿಕುಮಾರನನ್ನು ಅಪರಾಧಿ ಎಂದು ಪರಿಗಣಿಸಿದ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರದ ಪರ ಅಭಿಯೋಜಕ ಎಸ್.ಆರ್.ಪಾಟೀಲ ವಕಾಲತು ವಹಿಸಿದ್ದರು. ಅವರ ನಿವೃತ್ತಿ ಬಳಿಕ ವೈ.ಜಿ.ತುಂಗಳ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net