

ಪಿರಿಯಾಪಟ್ಟಣ: ಎರಡೂವರೇ ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪಿರಿಯಾಪಟ್ಟಣ ತಾಲೂಕಿನ ಪ್ರಮುಖ ಆಸ್ಪತ್ರೆಯಾದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ತಾಲೂಕಿನಲ್ಲಿ ದಿನದ 24 ಗಂಟೆಯೂ ಸಾರ್ವಜನಿಕರಿಗೆ ಚಿಕಿತ್ಸೆ ನೀಡುವ ತಾಲೂಕಿನ ಪ್ರಮುಖ ಆಸ್ಪತ್ರೆ ಇದಾಗಿದೆ. ತಾಲೂಕಿನ ಕಣಗಾಲು, ಹೊನ್ನಾಪುರ, ಬೆಟ್ಟದಪುರ, ಕಿತ್ತೂರು, ರಾವಂದೂರು, ನವಿಲೂರು, ಚೌತಿ, ಪಂಚವಳ್ಳಿ ಸೇರಿದಂತೆ ತಾಲೂಕಿನ ಗಿರಿಜನ ಹಾಡಿಗಳಿಂದಲೂ ಜನರ ತುರ್ತು ಹಾಗೂ ಪ್ರಮುಖ ಚಿಕಿತ್ಸೆಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯೇ ಮೊದಲ ಆದ್ಯತೆಯಾಗಿದೆ. ಆದರೆ ಸಂಜೆ ನಾಲ್ಕು ಗಂಟೆಯ ನಂತರ ತುರ್ತು ಚಿಕಿತ್ಸೆ ಹೊರತುಪಡಿಸಿ ಬೇರೆ ಯಾವುದೇ ಚಿಕಿತ್ಸೆಗಳಿಗೆ ಇಲ್ಲಿ ವೈದ್ಯರು ಲಭ್ಯವಿರುವುದಿಲ್ಲ.
ರಾತ್ರಿ ಪಾಳಿಗೆ ನಿಗದಿಯಾದ ವೈದ್ಯರು ಮಾತ್ರ ಕರ್ತವ್ಯದಲ್ಲಿರುತ್ತಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾರಿ ತೋರಿಸುವುದು ಸಾಮಾನ್ಯ.
ಈ ಆಸ್ಪತ್ರೆ ಹತ್ತು ವರ್ಷಗಳ ಹಿಂದೆಯೇ 100 ಹಾಸಿಗೆಗಳ ಮೇಲ್ದರ್ಜೆಗೇರಿದೆ. ದಂತ ವೈದ್ಯರು, ಕಣ್ಣಿನ ವೈದ್ಯರು, ಮೂಳೆ ತಜ್ಞರು, ಚರ್ಮರೋಗ ತಜ್ಞರು, ಫಿಜಿಷಿಯನ್ ಲಭ್ಯವಿದ್ದರೆ, ಪ್ರಸೂತಿ ತಜ್ಞರು, ಮಹಿಳಾ ವೈದ್ಯರು, ಹೃದಯ ಸಂಬಂಧಿತ ತಪಾಸಣೆಗಳ ತಜ್ಞರು, ಅರಿವಳಿಕೆ ತಜ್ಞರು, ನರರೋಗಗಳ ತಜ್ಞರು ಲಭ್ಯವಿಲ್ಲದೆ ಇರುವುದರಿಂದ ಜನರಿಗೆ ತೊಂದರೆ ಎದುರಾಗಿದೆ. ಹೊರರೋಗಿಗಳ ವಿಭಾಗದಲ್ಲಿ ನಾಲ್ವರು ತುರ್ತು ಚಿಕಿತ್ಸಾ ವೈದ್ಯರ ಹುದ್ದೆ ಖಾಲಿ ಇದ್ದು, ತಜ್ಞವೈದ್ಯರಿಗೆ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ.
ನಿತ್ಯ 500 ರಿಂದ 600 ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿರಿಯಾಪಟ್ಟಣ ತಾಲೂಕು ಕೇಂದ್ರವಾದ್ದರೂ ಇಲ್ಲಿ ವಾಸ್ತವ್ಯ ಹೂಡದ ಬಹುತೇಕ ಎಲ್ಲ ವೈದ್ಯರು ಮೈಸೂರಿನಿಂದಲೇ ನಿತ್ಯ ಓಡಾಡುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಹಾಜರಾಗಬೇಕಾದ ವೈದ್ಯರು ಬರುವುದೇ 10 ಗಂಟೆಗೆ. ಸಂಜೆ 4.30ರವರೆಗೆ ಇರಬೇಕೆಂಬ ನಿಯಮ ಇದ್ದರೂ ಮಧ್ಯಾಹ್ನ 3.30- 4 ಗಂಟೆಗೆಲ್ಲ ಮೈಸೂರಿನತ್ತ ಮುಖ ಮಾಡಿರುತ್ತಾರೆ. ಅಲ್ಲದೆ ಪ್ರಯೋಗಾಲಯದಲ್ಲೂ ಸಿಬ್ಬಂದಿ ಕೊರತೆ ಇದೆ. ಇವೆಲ್ಲದರಿಂದ ಸಂಜೆ ಸಮಯ ಈ ಭಾಗದ ರೋಗಿಗಳು ಸೂಕ್ತ ವೈದ್ಯಕೀಯ ಸೇವೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಈ ಬಗ್ಗೆ ವಿಜಯವಾಣಿಯ ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಎಲ್ಲ ವೈದ್ಯರು ಪಟ್ಟಣದಲ್ಲಿಯೇ ವಾಸ್ತವ್ಯ ಹೂಡುವಂತಾಗಬೇಕು. ರಾತ್ರಿ ವೇಳೆಯಲ್ಲಿ ತಜ್ಞ ವೈದ್ಯ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ವೈದ್ಯರಿಲ್ಲದೆ ಚಿಕಿತ್ಸೆಗಾಗಿ ಮೈಸೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಆಸ್ಪತ್ರೆಯಲ್ಲಿನ ಸ್ವಚ್ಛತೆಯತ್ತ ಹೆಚ್ಚಿನ ಗಮನ ಹರಿಸಬೇಕು. ಸ್ವಚ್ಛತಾ ಸಿಬ್ಬಂದಿ ಕೊರತೆಯೊಂದ ಶೌಚಗೃಹಗಳು ಗಬ್ಬುನಾರುತ್ತಿವೆ. ರಕ್ತದೊತ್ತಡ ಮತ್ತು ಮಧುಮೇಹ ತೊಂದರೆಯಿಂದ ಬಳಲುತ್ತಿರುವವರಿಗೆ ಕೆಲವೊಮ್ಮೆ ಅತ್ಯಂತ ಅಗತ್ಯವುಳ್ಳ ಔಷಧಗಳ ಕೊರತೆ ಕಂಡು ಬರುತ್ತಿದೆ.
ಹೇಮಂತ್ ವಿದ್ಯುತ್ ಗುತ್ತಿಗೆದಾರ, ಪಿರಿಯಾಪಟ್ಟಣ
ನಿತ್ಯ 6 ಮಂದಿಗೆ ಮಾತ್ರ ಡಯಾಲಿಸಿಸ್ ಚಿಕಿತ್ಸೆ ದೊರೆಯುತ್ತಿದ್ದು, ಇನ್ನುಳಿದವರು ಮೈಸೂರು, ಮಡಿಕೇರಿ ಅಥವಾ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ. ಡಯಾಲಿಸಿಸ್ ಚಿಕಿತ್ಸಾ ಉಪಕರಣಗಳ ಸಂಖ್ಯೆ ಹೆಚ್ಚು ಮಾಡಿ ಕನಿಷ್ಠ ನಿತ್ಯ 10ರಿಂದ 12 ಮಂದಿಗೆ ಡಯಾಲಿಸಿಸ್ ಚಿಕಿತ್ಸೆ ದೊರಕುವಂತಾಗಬೇಕು. ಆಸ್ಪತ್ರೆಯ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು. ಸ್ಕಾೃನಿಂಗ್, ಎಕ್ಸರೇ ಮತ್ತಿತರ ಪರೀಕ್ಷೆಗಳಿಗೆ ಖಾಸಗಿಯವರ ಬಳಿ ಕಳಿಸುವುದು ತಪ್ಪಿಸಬೇಕು. ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವತ್ತ ಸಂಬಂಧಪಟ್ಟರು ಗಮನ ಹರಿಸಬೇಕು.
ಮಂಜುನಾಥ್ ಪುರಸಭೆ ಮಾಜಿ ಸದಸ್ಯ, ಪಿರಿಯಾಪಟ್ಟಣ
ಈ ಹಿಂದೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ತಜ್ಞ ವೈದ್ಯರನ್ನು ಬೇರೆಡೆಗೆ ನಿಯೋಜಿಸಿದ್ದು, ಅವರ ಜಾಗಕ್ಕೆ ಬೇರೆ ಯಾರನ್ನೂ ಕಾಯಂ ಆಗಿ ನೇಮಕ ಮಾಡದಿರುವುದರಿಂದ ತಾಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅದರಲ್ಲೂ ಗರ್ಭಿಣಿಯರಿಗೆ ಹೆಚ್ಚು ತೊಂದರೆಯಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರುಗಳಿಗೆ ಪಟ್ಟಣದಲ್ಲಿಯೇ ವಸತಿಗೃಹಗಳ ನಿರ್ಮಾಣವಾಗಬೇಕು. ದಿನದ 24 ಗಂಟೆಯೂ ವೈದ್ಯರು ಲಭ್ಯವಿರುವಂತೆ ಆಗಬೇಕು. ತುರ್ತು ಸಂದರ್ಭದಲ್ಲಿ ಸಾಮಾನ್ಯ ಜನರ ಪಾಡು ಹೇಳತೀರದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ದರ ತೆತ್ತು ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಇದೆ.
ಕೆ.ಆರ್.ನಿರೂಪಾ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ, ಪಿರಿಯಾಪಟ್ಟಣ
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಸಂದರ್ಭಗಳಲ್ಲಿ ವೈದ್ಯರು ಲಭವಿಲ್ಲದ ಕಾರಣ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಸಕಾಲದಲ್ಲಿ ತಜ್ಞ ವೈದ್ಯರು ಸಿಗುವಂತಾಗಬೇಕು. ಪಿರಿಯಾಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರತೆ ಇರುವ ವೈದ್ಯರು ಮತ್ತು ಟೆಕ್ನಿಷಿಯನ್‌ಗಳನ್ನು ಕೂಡಲೇ ಭರ್ತಿ ಮಾಡುವತ್ತ ಕ್ರಮ ವಹಿಸಬೇಕು. ರೋಗಿಗಳಿಗೆ ತಾಲೂಕು ಮಟ್ಟದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡದೆ ಮೈಸೂರಿನ ಆಸ್ಪತ್ರೆಗಳಿಗೆ ಕಳುಹಿಸುವುದರಿಂದ ಬಡವರು ಸಂಕಷ್ಟ ಅನುಭವಿಸುವಂತಾಗಿದೆ. ವೃದ್ಧ ಮಹಿಳೆಯರು ಮತ್ತು ಗರ್ಭಿಣಿ ಮಹಿಳೆಯರಿಗೆ ದೂರ ಪ್ರಯಾಣಿಸುವ ಸಾಧ್ಯತೆಗಳನ್ನು ಕಡಿಮೆ ಮಾಡಬೇಕು.
ಪ್ರೀತಿ ಅರಸ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಬೆಟ್ಟದತುಂಗ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿನಿತ್ಯ 500 ರಿಂದ 600 ಜನ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳರೋಗಿಗಳಾಗಿ ನಿತ್ಯ 25 ರಿಂದ 30 ಜನ ದಾಖಲಾಗುತ್ತಾರೆ. ಮಹಿಳಾ ತಜ್ಞ ವೈದ್ಯರು, ಅರಿವಳಿಕೆ ತಜ್ಞರು ಮತ್ತು 4 ತುರ್ತು ಚಿಕಿತ್ಸಾ ವೈದ್ಯರ ಹುದ್ದೆ ಖಾಲಿ ಇವೆ. ವಾರಕ್ಕೆ ಎರಡು ದಿನ ಮೈಸೂರಿನಿಂದ ಮಹಿಳಾ ತಜ್ಞ ವೈದ್ಯರು ಭೇಟಿ ನೀಡುತ್ತಿದ್ದಾರೆ. ಆದರೆ ಕಾಯಂ ಆಗಿ ಮಹಿಳಾ ತಜ್ಞ ವೈದ್ಯರು ಆಸ್ಪತ್ರೆಗೆ ನೇಮಕಗೊಂಡಲ್ಲಿ ಮಹಿಳೆಯರಿಗೆ ಅನುಕೂಲವಾಗಲಿದೆ. ಲ್ಯಾಬೋರೇಟರಿಯಲ್ಲಿ ಎನ್‌ಆರ್‌ಎಚ್‌ಎಂ ಸಿಬ್ಬಂದಿ ಸೇವೆ ಪಡೆಯಲಾಗುತ್ತಿದೆ.
ಡಾ.ಪೃಥ್ವಿ ಆಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಪಿರಿಯಾಪಟ್ಟಣ
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುತ್ತಿದ್ದಾರೆ. ಮಂಗಳವಾರ, ಬುಧವಾರ ಮೈಸೂರಿನಿಂದ ಮಹಿಳಾ ತಜ್ಞ ವೈದ್ಯರು ಬರುತ್ತಿದ್ದಾರೆ. ಆದಷ್ಟು ಶೀಘ್ರವಾಗಿ ಕಾಯಂ ಮಹಿಳಾ ತಜ್ಞ ವೈದ್ಯರ ನೇಮಕವಾಗಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊರಗಿನಿಂದ ಔಷಧಗಳನ್ನು ಖರೀದಿಸುವಂತೆ ಚೀಟಿ ನೀಡಬಾರದು. ಆಸ್ಪತ್ರೆಯಲ್ಲಿಯೇ ಔಷಧ ನೀಡುವಂತಾಗಬೇಕು. ಸಾರ್ವಜನಿಕರ ದೂರುಗಳಿಗೆ ಕೂಡಲೇ ಸ್ಪಂದಿಸದಿರುವ 108 ವಾಹನ ಸಿಬ್ಬಂದಿ ಖಾಸಗಿ ಆಸ್ಪತ್ರೆಯ ಮುಂದೆ ಹೋಗಿ ಅಲ್ಲಿಂದ ರೋಗಿಗಳನ್ನು ಮೈಸೂರಿಗೆ ಕರೆದೊಯ್ಯುತ್ತಿರುವುದು ಕಂಡುಬರುತ್ತಿದೆ.
ಶುಭಾ ಗೌಡ ಆರೋಗ್ಯ ರಕ್ಷಾ ಸಮಿತಿ ಮಾಜಿ ಸದಸ್ಯೆ, ಪಿರಿಯಾಪಟ್ಟಣ